ಬೆಂಗಳೂರು: ಯುವ ಕಾಂಗ್ರೆಸ್‌ನಲ್ಲಿ ನಡೆದ ಗದ್ದಲ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕೋವಿಡ್ ವಾರ್ ರೂಂ ಸ್ಥಾಪನೆ ವಿರೋಧಿಸಿ ಎಸ್.ಸಿ ಸಮುದಾಯದ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾಗೆ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಧಮ್ಮಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಭವ್ಯಾ ರಕ್ಷಣೆ ಕೋರಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿನ್ನೆ ಸಂಜೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ನಿರ್ಮಾಣದ ಕೆಲಸದ ವೇಳೆ ಅಡ್ಡಿಪಡಿಸಿ ನಲಪಾಡ್ ಭವ್ಯಾಗೆ ಧಮ್ಮಿ ಹಾಕಿದ್ದಾರೆ ಎನ್ನಲಾಗಿದೆ. ನಲಪಾಡ್ ಹಾಗೂ ಬೆಂಬಲಿಗರ ಬೆದರಿಕೆ, ಧಮ್ಮಿ ಹಾಗೂ ಗಲಾಟೆ ಹಿನ್ನೆಲೆಯಲ್ಲಿ ಭವ್ಯಾ ಹೈಗ್ರೌಂಡ್ಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರಿನಲ್ಲಿ ನಲಪಾಡ್ ಬೆದರಿಕೆ ಬಗ್ಗೆ ಸಂಪೂರ್ಣ ವಿವರ ಹಾಗೂ ಇತಿಹಾಸ ಉಲ್ಲೇಖಿಸಿದ್ದಾರೆ.
ಬಸವಕಲ್ಯಾಣದಲ್ಲಿ ನಡೆದ ಚುನಾವಣಾ ಪ್ರಚಾರಕ್ಕೆ ಹೋದಾಗ ಸಹ ತೊಂದರೆ ಕೊಟ್ಟಿದ್ದಾರೆ. ನನ್ನ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ದೆಹಲಿಯಲ್ಲೂ ಕೂಡ ನಲಪಾಡ್ ನನ್ನ ಮೇಲೆ ಕೂಗಾಡಿ, ಕೆಲ ಶಾಸಕರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಿಗೆ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಮೂರು ಪುಟಗಳ ಸುದೀರ್ಘ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು ಹೊಡೆಯುವ ಹಾಗೆ ಕೈ ತೋರಿಸಿದ್ದಾರೆ. ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಅರ್ಧ ಗಂಟೆಯ ನಂತರ ಮತ್ತೆ 5 ಜನರು ಬಂದು ನಮ್ಮ ಬಾಸ್ ನಲಪಾಡ್‌ರವರ ತಂಟೆಗೆ ಬಂದರೆ ನಾವು ನಿಮ್ಮನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂದು ಧಮ್ಮಿ ಹಾಕಿದ್ದಾರೆ. ನಲಪಾಡ್ ಹಾಗೂ ಬೆಂಬಲಿಗರು ಹಿಂಸಿಸುತ್ತಿದ್ದಾರೆ. ನನಗೆ ಏನು ಮಾಡ್ತಾರೋ ಎಂಬ ಭಯವಿದೆ. ಹೀಗಾಗಿ ನನಗೆ ರಕ್ಷಣೆ ಕೊಡಿ ಎಂದು ಭವ್ಯ ಪೊಲೀಸರ ಮೊರೆ ಹೋಗಿದ್ದಾರೆ.
ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15ಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ನಲಪಾಡ್ ಹಾಗೂ ಬೆದರಿಕೆ ಹಾಕಿದ ಅವರ ಬೆಂಬಲಿಗರೆಲ್ಲರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತೆ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.