ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಮಾತನಾಡಲಿ, ಅವರದೇ ಆದ ಅನುಭವ ಅವರಿಗೆ ಇದೆ. ಅಣ್ಣ ಮಾತನಾಡುವುದನ್ನು ತಮ್ಮ ಕೇಳ್ತಾ ಇರುತ್ತಾನೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ. ಸದಾಶಿವನಗರ ತಮ್ಮ ನಿವಾಸದ ಬಳಿ ಹೆಚ್. ಡಿ. ಕುಮಾರಸ್ವಾಮಿ ಮಾಡಿರುವ ವರ್ಗಾವಣೆ ಆರೋಪ ಸಂಬಂಧ ಪ್ರತಿಕ್ರಿಯಿಸಿ, ತಿರುಗೇಟು ನೀಡಿದ್ದಾರೆ.
ಅವರಿಗೆ ಏನು ಕುಷಿ ಇದೆಯೋ ಅದನ್ನೆಲ್ಲ ಮಾತನಾಡಲಿ. ಅವರಿಗೆ ಅದರಿಂದ ಸಮಾಧಾನ ಆಗುವುದಾದರೆ ನಾವು ಯಾರೂ ಬೇಡ ಎಂದು ಹೇಳುವುದಿಲ್ಲ. ರೆಸ್ಟ್ ತಗೊಂಡು ಬಂದಿದ್ದಾರೆ. ಒಳ್ಳೆಯದಾಗಲಿ ಎಂದರು. ಆರ್. ಆರ್. ನಗರ ಅಧಿಕಾರಿಗಳ ವರ್ಗಾವಣೆ ಬಗ್ಗೆ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾವ ಶಿಫಾರಸನ್ನೂ ಕೊಟ್ಟಿಲ್ಲ. ಡಿ ಕೆ ಸುರೇಶ್ ಅವರಿಗೆ ಈ ಬಗ್ಗೆ ಅಸಮಾಧಾನ ಆಗಿದ್ದರೆ ಅವರನ್ನೇ ಕೇಳಿ. ನಾನು ಸರ್ಕಾರ, ಎಂದಷ್ಟೇ ಸ್ಪಷ್ಟಪಡಿಸಿದರು.
ಡಿ ಕೆ ಶಿವಕುಮಾರ್ ಅವರು ಮಾಟ ಮಂತ್ರ ಮಾಡಿ ಚುನಾವಣೆ ಗೆದ್ದಿದ್ದಾರೆ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಬಹಳ ಸಂತೋಷ. ಅವರ ಆಶೀರ್ವಾದ ನಮಗೆ ಬಹಳ ಮುಖ್ಯ. ಅವರ ಮಾರ್ಗದರ್ಶನ ಬಹಳ ಮುಖ್ಯ. ಮಾಯನೋ, ಮಾಟನೋ, ಜ್ಯೋತಿಷ್ಯನೋ, ಕರ್ಮನೋ, ಶ್ರಮನೋ, ಎಲ್ಲಿ ಮನಸ್ಸು ಇದೆಯೋ ಅಲ್ಲಿ ಮಾರ್ಗ ಇದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ ಎಂದು ವಿವರಿಸಿದರು.
ಇದನ್ನು ನಂಬಿ, ಶ್ರಮ ಪಟ್ಟು ಮೂರು ವರ್ಷ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ, ಊಟ ಮಾಡಿಲ್ಲ. ನಮ್ಮ ಕಾರ್ಯಕರ್ತರು ಮಲಗುವುದಕ್ಕೆ ಬಿಟ್ಟಿಲ್ಲ. ಜನ ವಿಶ್ವಾಸ ಇಟ್ಟು, ನಂಬಿಕೆ ಇಟ್ಟು ಓಟ್ ಹಾಕಿದ್ದಾರೆ. ನಮಗೆ ಅಧಿಕಾರ ಕೊಟ್ಟಿದ್ದಾರೆ. ಈಗ ಅವರ ಋಣ ತೀರಿಸಬೇಕು. ಆ ಕೆಲಸ ನಾವು ಮಾಡಬೇಕು ಎಂದು ತಿಳಿಸಿದರು.
ದೆಹಲಿಯಲ್ಲಿ ಡಿ ಕೆ ಶಿವಕುಮಾರ್ ಮಾತು: ಇತ್ತೀಚೆಗೆ ದೆಹಲಿಯಲ್ಲಿ ಮುಂದಿನ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಕೇಂದ್ರದ ಕಾಂಗ್ರೆಸ್ ವರಿಷ್ಠರು ರಾಜ್ಯದ ನಾಯಕರ ಜೊತೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಡಿ ಕೆ ಶಿವಕುಮಾರ್ ಅವರು, ಕಾಂಗ್ರೆಸ್ ಕರ್ನಾಟಕ ಮಾದರಿಯನ್ನು ದೇಶದಾದ್ಯಂತ ಹೇಗೆ ಜಾರಿಗೆ ತರಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ನೈಸ್ ರಸ್ತೆ ಅಕ್ರಮದ ವಿರುದ್ಧ ಜೆಡಿಎಸ್ - ಬಿಜೆಪಿ ಒಟ್ಟಾಗಿ ಹೋರಾಡಲಿದೆ; ಕುಮಾರಸ್ವಾಮಿ ಘೋಷಣೆ