ಬೆಂಗಳೂರು: ವಿಭಿನ್ನ ವೇಷಭೂಷಣ ಧರಿಸಿ ಸ್ಟಂಟ್ ಮಾಡಿ ಒನ್ ವೇನಲ್ಲಿ ನುಗ್ಗಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್ ರೈಡರ್ನನ್ನು ಪತ್ತೆ ಹಚ್ಚಿರುವ ಯಲಹಂಕ ಪೊಲೀಸರು ದಂಡ ವಿಧಿಸಿದ್ದಾರೆ. ಅಲ್ಲದೆ, ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ. ಮೊಹಮ್ಮದ್ ಜಾವೀದ್ ಬೈಕ್ನಲ್ಲಿ ಸ್ಟಂಟ್ ಮಾಡಿ ಸಿಕ್ಕಿಬಿದ್ದಿರುವ ಬೈಕ್ ರೈಡರ್.
ಮೊಹಮ್ಮದ್ ಜಾವೀದ್ ವೃತ್ತಿಯಲ್ಲಿ ಯೂಟ್ಯೂಬರ್ ಆಗಿದ್ದು, ಈತನಿಗೆ ಆರು ಲಕ್ಷ ಫಾಲೋವರ್ಸ್ಗಳಿದ್ದಾರೆ. ನಿರ್ಗತಿಕರಿಗೆ ಹಣ್ಣು-ಹಂಪಲು ನೀಡುತ್ತಿದ್ದ. ಅದನ್ನ ತನ್ನ ಯೂಟ್ಯೂಬ್ ಪೇಜ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ. ರೀಲ್ಸ್ ಚಟಕ್ಕೆ ಬಿದ್ದಿದ್ದ ಈತ ಬೊಂಬೆಯ ಮುಖವಾಡ ಧರಿಸಿ ಕ್ರೇಜಿಯಾಗಿ ವಾಹನ ಚಾಲನೆ ಮಾಡುತ್ತಿದ್ದ.
ಇತ್ತೀಚೆಗೆ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಬೈಕ್ಗೆ ಕಾರು ಡಿಕ್ಕಿ ಹೊಡೆದಿತ್ತು. ಬಳಿಕ ಕಾರನ್ನ ಹಿಂಬಾಲಿಸಿದ ಜಾವೀದ್, ಕಾರಿನ ಕನ್ನಡಿ ಒಡೆದು ಹಾಕಿ ಓನ್ವೇನಲ್ಲಿ ಬೈಕ್ ತಿರುಗಿಸಿ ಎಸ್ಕೇಪ್ ಆಗಿದ್ದ. ಈತನ ಪ್ರತಿಯೊಂದು ಸ್ಟಂಟ್ಗಳನ್ನ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ.
ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ: ವಿಡಿಯೋ ಗಮನಿಸಿ ಸಾರ್ವಜನಿಕರಿಂದ ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ದವು. ವಿಡಿಯೋ ಪರಿಶೀಲನೆ ನಡೆಸಿ ಬೈಕ್ ಮತ್ತು ರೈಡರ್ನನ್ನು ಯಲಹಂಕ ಸಂಚಾರ ಪೊಲೀಸರು ಪತ್ತೆ ಮಾಡಿದ್ದಾರೆ. ಕ್ರೇಜಿ ಬೈಕ್ ರೈಡರ್ನ ಬೈಕ್ ಜಪ್ತಿ ಮಾಡಿದ್ದು, ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಪುಂಡರ ನೈಟ್ ಜಾಲಿ ವ್ಹೀಲಿಂಗ್ : (ಏಪ್ರಿಲ್ 19-2023) ರಂದು 4 ಗಂಟೆಯ ಸುಮಾರಿಗೆ ಯುವಕರ ತಂಡವೊಂದು ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದರು. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಬೊಮ್ಮಸಂದ್ರ ಮೇಲ್ಸೇತುವೆ ಮೇಲೆ ಮೂರ್ನಾಲ್ಕು ಯುವಕರು ಪ್ರತ್ಯೇಕ ಬೈಕ್ಗಳಲ್ಲಿ ಅಪಾಯಕಾರಿ ಜಾಲಿ ರೈಡಿಂಗ್ ನಡೆಸಿದ್ದ ವಿಡಿಯೋ ಲಭ್ಯವಾಗಿತ್ತು.
ಬಾರಿ ಪ್ರಮಾಣದ ವಾಹನ ಸವಾರರಿಗೆ ಚಮಕ್: ವ್ಹೀಲಿಂಗ್ ಮಾಡುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲು ಆರಭಿಸುತ್ತಿದ್ದಂತೆ ಮೂವರು ಯುವಕರು ವೇಗವಾಗಿ ಪರಾರಿಯಾಗಿದ್ದರು. ಇವರಲ್ಲಿ ಓರ್ವ ಯುವಕ ಚಂದಾಪುರದಿಂದ ಆಚೆಗೂ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತ ಸಾಗಿದ್ದ. ಸಾಮಾನ್ಯವಾಗಿ ಈ ವೇಳೆಯಲ್ಲಿ ನಿದ್ರೆ ಮಂಪಿನಲ್ಲಿರುವ ಬಾರಿ ಪ್ರಮಾಣದ ವಾಹನ ಸವಾರರಿಗೆ ಚಮಕ್ ಕೊಡುವ ಈ ಯುವಕರು ಅಪಘಾತಕ್ಕೆ ಕಾರಣರಾಗಿದ್ದರು.
ಇದನ್ನೂ ಓದಿ: ಬೈಕ್ ಸ್ಟಂಟ್ ಮಾಡಲು ಹೋಗಿ ಡಿವೈಡರ್ಗೆ ಗುದ್ದಿದ ಯುವಕರು : ಭಯಾನಕ ವಿಡಿಯೋ ನೋಡಿ
ಇತರೆ ವಾಹನ ಸವಾರರಿಗೂ ತೊಂದರೆಯಾಗಲಿದೆ: ಹೆದ್ದಾರಿಯಲ್ಲಿ ಪುಂಡರು ಬೈಕ್ ಸ್ಟಂಟ್ ಹಾಗೂ ವ್ಹೀಲಿಂಗ್ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೂ ತೊಂದರೆಯಾಗಲಿದೆ. ಪೊಲೀಸರು ವ್ಹೀಲಿಂಗ್ಗೆ ಕಡಿವಾಣ ಹಾಕಲು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಪೂರ್ಣ ಪ್ರಮಾಣದಲ್ಲಿ ಇಂಥ ಅಟ್ಟಹಾಸ ನಿಲ್ಲುತ್ತಿಲ್ಲ ಎಂಬುದೇ ವಿಪರ್ಯಾಸ. ಈ ಕುರಿತು ಇತರೆ ಸವಾರರು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಪುಂಡರ ನೈಟ್ ಜಾಲಿ ವ್ಹೀಲಿಂಗ್- ವಿಡಿಯೋ