ಬೆಂಗಳೂರು: ಜಗಳ ಆಡುತ್ತಿದ್ದ ಮಕ್ಕಳಿಗೆ ತಂದೆ ಬುದ್ದಿ ಮಾತು ಹೇಳಿದ್ದಾರೆ. ಇದರಿಂದ ನೊಂದ ಬಾಲಕ ಮನೆಯಿಂದ ನಾಪತ್ತೆಯಾಗಿದ್ದಾನೆ.
ರತನ್ ಗೌಡ(14) ನಾಪತ್ತೆಯಾಗಿರುವ ಬಾಲಕ. ಈತ ಮಹಾಲಕ್ಷ್ಮೀ ಲೇಔಟ್ನ ನಿವಾಸಿ ಮನೋಹರ್ ಎಂಬುವವರ ಮಗ. ರತನ್ ಗೌಡ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದು, ಈತ ವಿದ್ಯಾಭಾರತಿ ಸ್ಕೂಲ್ನಲ್ಲಿ 7ನೇ ತರಗತಿ ಓದುತ್ತಿದ್ದ. ನಿನ್ನೆಅಕ್ಕನ ಜೊತೆ ಜಗಳ ಮಾಡುತ್ತಿದ್ದ. ಇದನ್ನು ಗಮನಿಸಿದ ತಂದೆ ಮನೋಹರ್ ಬುದ್ದಿ ಮಾತು ಹೇಳಿದ್ದಾರೆ. ಇದಾದ ಬಳಿಕ ಅಪ್ಪನಿಂದ ಏಟು ಬೀಳಬಹುದೆಂಬ ಭಯದಲ್ಲಿ ಬಾಲಕ ಮನೆ ಬಿಟ್ಟಿರಬಹುದು ಎನ್ನಲಾಗುತ್ತಿದೆ.
ನಿನ್ನೆ ರಾತ್ರಿ ಮನೆಯಿಂದ ಆಚೆ ಹೋದವನು ಇದುವರೆಗೂ ಮನೆಗೆ ಬಂದಿಲ್ಲ. ಇದರಿಂದ ಭಯಗೊಂಡ ದಂಪತಿ ಬಾಲಕನಿಗಾಗಿ ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಮೆಜೆಸ್ಟಿಕ್ ಸುತ್ತಮುತ್ತ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ.
ಮನೋಹರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬ ಗಂಡು ಮಗ ಇದ್ದು, ಕಾಣೆಯಾಗಿರುವ ರತನ್ಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ ಎನ್ನಲಾಗುತ್ತಿದೆ. ಮಗ ಕಾಣೆಯಾದ ಕುರಿತು ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.