ಬೆಂಗಳೂರು: ರಾಜ್ಯ ಬಿಜೆಪಿಗೆ ಮಾಸ್ ಇಮೇಜ್ ತಂಡಕೊಟ್ಟಿರುವ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಕಡೆಗೂ ತಮ್ಮ ಪುತ್ರನನ್ನು ಗ್ರ್ಯಾಂಡ್ ಆಗಿ ಲಾಂಚ್ ಮಾಡಿದ್ದಾರೆ. ಪಕ್ಷದ ಸಾರಥ್ಯ ಕೊಡಿಸುವ ಜೊತೆಗೆ ಮಾಸ್ ಗೆಟಪ್ನ ಟಚ್ ಸಿಗುವಂತೆ ಮೊದಲ ದಿನವೇ ನೋಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಪದಗ್ರಹಣದ ದಿನವೇ ಪುತ್ರನ ಜನಪ್ರಿಯತೆಯನ್ನು ಅನಾವರಣಗೊಳಿಸಿದ್ದಾರೆ. ಪದಗ್ರಹಣ ಕಾರ್ಯಕ್ರಮದಲ್ಲಿ ಅಪ್ಪನ ರೀತಿಯಲ್ಲಿಯೇ ಜನರತ್ತ ಕೈಬೀಸಿ ಬಿ ವೈ ವಿಜಯೇಂದ್ರ ಅವರು ಸೇರಿದ್ದ ಜನರ ಗಮನ ಸೆಳೆದಿದ್ದಾರೆ.
ಯಡಿಯೂರಪ್ಪ ಕನಸು ನನಸಾಯ್ತು: ಈ ಮೂಲಕ ಪುತ್ರನಿಗೆ ರಾಜಕೀಯ ಭದ್ರನೆಲೆ ಕಲ್ಪಿಸಿಕೊಡುವ ಕನಸನ್ನು ಕಡೆಗೂ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ನನಸಾಗಿಸಿಕೊಂಡಿದ್ದಾರೆ. ತಮ್ಮ ಕ್ಷೇತ್ರವನ್ನೇ ಪುತ್ರನಿಗೆ ಬಿಟ್ಟುಕೊಟ್ಟು ಚುನಾವಣಾ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿದ್ದ ಯಡಿಯೂರಪ್ಪ ಇದೀಗ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸುವ ಮೂಲಕ ಪುತ್ರ ವಿಜಯೇಂದ್ರ ಅವರ ಮುಂದಿನ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿದ್ದಾರೆ. ಓರ್ವ ಪುತ್ರ ಸಂಸದನಾದರೆ ಮತ್ತೋರ್ವ ಪುತ್ರ ಶಿಕಾರಿಪುರ ಶಾಸಕ ಹಾಗು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಆ ಮಟ್ಟಿಗೆ ಪುತ್ರರಿಬ್ಬರ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.
ಇನ್ನು ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಮಾಸ್ ಇಮೇಜ್ ಇದೆ. ಯಡಿಯೂರಪ್ಪ ಎಲ್ಲಿಯೇ ಹೋಗಲಿ ಜನರು ಸೇರುತ್ತಾರೆ. ಜೈಕಾರ ಹಾಕುತ್ತಾರೆ. ದೊಡ್ಡ ಮಟ್ಟದ ಬೆಂಬಲಿಗರ ಪಡೆಯನ್ನು ಯಡಿಯೂರಪ್ಪ ಹೊಂದಿದ್ದಾರೆ. ಅದೇ ಇಮೇಜ್ ಅನ್ನು ಪುತ್ರನಿಗೂ ಕಲ್ಪಿಸಿಕೊಡುವುದು ಯಡಿಯೂರಪ್ಪ ಅವರ ಉದ್ದೇಶವಾಗಿದ್ದು, ಅದಕ್ಕಾಗಿಯೇ ಪದಗ್ರಹಣ ಸಮಾರಂಭದ ವೇಳೆಯೇ ಇಮೇಜ್ ಕ್ರಿಯೇಟ್ ಮಾಡುವಲ್ಲಿ ಸಫಲರಾಗಿದ್ದಾರೆ.
ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು: ಪಕ್ಷದ ಕಚೇರಿಯೊಳಗಿನ ಸರಳ ಕಾರ್ಯಕ್ರಮವಾದರೂ ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಕರೆಸಲಾಗಿತ್ತು. ಹರಿದುಬಂದಿದ್ದ ಜನಸಾಗರದಿಂದ ವಿಜಯೇಂದ್ರ ಅಭಿಮಾನದ ಅಭಿನಂದನೆ ಸ್ವೀಕರಿಸಿದರು. ಕಿಕ್ಕಿರಿದು ನುಗ್ಗಿದ ಜನರೆಲ್ಲರತ್ತಲೂ ಕೈಬೀಸುತ್ತ ಅಭಿಮಾನ ಪ್ರದರ್ಶಿಸಿದರು. ಹೂಗುಚ್ಛ ಸ್ವೀಕರಿಸಿ ಹಸ್ತಲಾಘವ ನೀಡಿದರು. ಮಹಿಳೆಯರಾದಿಯಾಗಿ ಅಭಿಮಾನಿಗಳು ವಿಜಯೇಂದ್ರ ಜೊತೆ ಸೆಲ್ಫಿಗೆ ಮುಗಿಬಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸದೆ ಸಮಾಧಾನದಿಂದಲೇ ಎಲ್ಲರ ಶುಭಾಷಯ ಸ್ವೀಕಾರ ಮಾಡಿದರು. ಅಪ್ಪನ ರೀತಿಯಲ್ಲಿಯೇ ಎಲ್ಲರತ್ತ ಕೈಬೀಸಿ ಗಮನ ಸೆಳೆದರು. ಒಂದು ರೀತಿಯಲ್ಲಿ ರಾಜ್ಯ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿದಂತೆ ಇಂದಿನ ಕಾರ್ಯಕ್ರಮ ಮೂಡಿಬಂದಿದ್ದು ವಿಶೇಷ.
ಇಡೀ ಬಿಜೆಪಿ ಕಚೇರಿ ಕಾರ್ಯಕರ್ತರಿಂದ ತುಂಬಿ ತುಳುಕಿತ್ತು. ವೇದಿಕೆಗೆ ಆಗಮಿಸಲು ಬಸವರಾಜ ಬೊಮ್ಮಾಯಿ ಸಾಕಷ್ಟು ಸಮಯ ತೆಗೆದುಕೊಳ್ಳಬೇಕಾಯಿತು. ಮಾಜಿ ಡಿಸಿಎಂ ಆರ್. ಅಶೋಕ್ ಅವರು ವೇದಿಕೆಯತ್ತ ತೆರಳಲೂ ಆಗದೆ ಕಚೇರಿಯಲ್ಲೇ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇಡೀ ಕಚೇರಿ ಕಾರ್ಯಕರ್ತರಿಂದಲೇ ತುಂಬಿ ತುಳುಕಿತ್ತು. ಇದೆಲ್ಲಾ ರಾಜ್ಯ ಬಿಜೆಪಿಗೆ ಹೊಸ ಸಂಚಲನ ಮೂಡಿಸಿದ್ದರಲ್ಲಿ ಎರಡು ಮಾತಿಲ್ಲ.
ವಿಜಯೇಂದ್ರ ಕೊರಳಿಗೆ ಸೇಬುಹಣ್ಣಿನ ಹಾರ: ಇನ್ನು ವಿಜಯೇಂದ್ರ ಅವರಿಗೆ ಗೌರವ ಪೂರ್ವಕವಾಗಿ ಸೇಬುಹಣ್ಣಿನ ಹಾರವನ್ನು ಹಾಕಲಾಯಿತು. ಬೃಹತ್ ಸೇಬಿನ ಹಾರವನ್ನು ದೊಡ್ಡ ಕ್ರೇನ್ ಬಳಸಿ ಹಾಕಲಾಯಿತು. ಗೌರವ ಸ್ವೀಕರಿಸಿ ವಿಜಯೇಂದ್ರ ವಾಪಸಾಗುತ್ತಿದ್ದಂತೆ ಕೆಲವೇ ಕ್ಷಣದಲ್ಲಿ ಅಲ್ಲಿ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳು ಸೇಬುಗಳನ್ನು ಖಾಲಿ ಮಾಡಿದ್ದು, ಸೇಬು ಹಾರದಲ್ಲಿದ್ದ ಸೇಬುಗಳು ಮಾಯವಾಗಿ ದಾರ ಮಾತ್ರ ಉಳಿದುಕೊಂಡಿತ್ತು.
ಇದನ್ನೂ ಓದಿ: ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಸೋಮಣ್ಣ, ಯತ್ನಾಳ್, ಸೋಮಶೇಖರ್ ಗೈರು