ಬೆಂಗಳೂರು: ಯಶಸ್ವಿನಿ ವಿಮೆ ಯೋಜನೆ ಸದಸ್ಯತ್ವ ನೋಂದಣಿ ಅವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ. 2022-23ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ಜ.31ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.
ಈ ಹಿಂದೆ 2022-23ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು 1-11-2022 ರಿಂದ 31-12-2022 ರವರೆಗೆ ನಿಗದಿಗೊಳಿಸಿ ಆದೇಶಿಸಲಾಗಿತ್ತು.
ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪತ್ರ ಬರೆದು ಯಶಸ್ವಿನಿ ಯೋಜನೆಯ ಸದಸ್ಯತ್ವ ನೋಂದಣಿ ಅವಧಿಯನ್ನು ಡಿ.31, 2022ರ ವರೆಗೆ ನಿಗದಿಪಡಿಸಿದ್ದು, ಈ ಅವಧಿಯಲ್ಲಿ ಅರ್ಹ ಇರುವ ಎಲ್ಲ ಸದಸ್ಯರನ್ನು ನೋಂದಾಯಿಸಲು ಸಾಧ್ಯವಾಗಿರುವುದಿಲ್ಲ ಎಂದು ಹಾಗೂ ಅನೇಕ ಸಹಕಾರ ಸಂಘಗಳ ಸದಸ್ಯರು, ಸಹಕಾರಿಗಳು ಹಾಗೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳು ನೋಂದಣಿ ಅವಧಿಯನ್ನು ವಿಸ್ತರಿಸುವಂತೆ ಕೋರಿರುವುದಾಗಿ ತಿಳಿಸಿದ್ದಾರೆ.
ಯೋಜನೆಗೆ ನಿಗದಿಪಡಿಸಿರುವ 30 ಲಕ್ಷಗಳ ನೋಂದಣಿ ಗುರಿಯನ್ನು ಸಾಧಿಸಲು ನೋಂದಣಿ ದಿನಾಂಕದ ಅವಧಿಯನ್ನು ವಿಸ್ತರಿಸುವುದು ಸಮಂಜಸ ಎಂದು ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು.ಈ ಹಿನ್ನೆಲೆ ಇದೀಗ ಸರ್ಕಾರ ಸದಸ್ಯತ್ವ ನೋಂದಣಿ ಅವಧಿಯನ್ನು ಒಂದು ತಿಂಗಳಿಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಸುಮಾರು 20 ಲಕ್ಷ ಸದಸ್ಯರು ನೋಂದಣಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಸಹಕಾರ ಸಂಘಗಳ/ಸ್ವ-ಸಹಾಯ ಗುಂಪುಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ 500 ರೂ. ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರು 100 ರೂ.ಗಳನ್ನು ಪಾವತಿಸಬೇಕು. ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ 1000 ರೂ. ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ 200 ರೂ. ವಂತಿಗೆ ನಿಗದಿಪಡಿಸಲಾಗಿದೆ. ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ ರೂ.5 ಲಕ್ಷಕ್ಕೆ ನಿಗದಿಪಡಿಸಿದೆ. ರಾಜ್ಯದ ಯಾವುದೇ ಯಶಸ್ಸಿನಿ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಏನಿದು ಯಶಸ್ವಿನಿ ಯೋಜನೆ: ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ. ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಒಂದು 'ಸ್ವಯಂ-ನಿಧಿ ಶಸ್ತ್ರಚಿಕಿತ್ಸಾ ಯೋಜನೆ'. ಈ ಯೋಜನೆಯಡಿ ಗ್ರಾಮೀಣ ಸಹಕಾರಿಯೊಬ್ಬರು ತಿಂಗಳಿಗೆ ಇಂತಿಷ್ಟರಂತೆ ನಿಗದಿತ ಪ್ರಮಾಣದಲ್ಲಿ ಒಂದು ವರ್ಷದ ಅವಧಿಯಲ್ಲಿ ಯೋಜನೆಯಲ್ಲಿ ಒಳಗೊಂಡ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಮಿತಿಯೊಳಗೆ, ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ಟ್ರಸ್ಟ್ನಿಂದ ಅಂಗೀಕೃತ ಯಾವುದೇ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಪಡೆಯಬಹುದು
ಯಾವ ಯಾವ ಸದಸ್ಯರು ಸೇರಿರುತ್ತಾರೆ: ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ/ಸಹಕಾರಿ ಬ್ಯಾಂಕುಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಕೂಡ ಯೋಜನೆಯ ಸೌಲಭ್ಯ ಪಡೆಯಬಹುದು. ನಗರ/ಪಟ್ಟಣ ಪ್ರದೇಶದಲ್ಲಿ ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯ ಸೌಲಭ್ಯ ಪಡೆಯಲು ವಯೋಮಿತಿ ನಿಗದಿಪಡಿಸಲಾಗಿಲ್ಲ. ಯೋಜನೆಯ ಸೌಲಭ್ಯವನ್ನು ಜೀವಿತಾವಧಿಯವರಿಗೆ ಪಡೆಯಬಹುದು.
ಫಲಾನುಭವಿಗಳಿಗೆ ದೊರೆಯುವ ಇತರ ಸೌಲಭ್ಯಗಳು ಯಾವುವು: ಟ್ರಸ್ಟ್ನಿಂದ ಅಂಗೀಕೃತವಾದ ಆಸ್ಪತ್ರೆಗಳಲ್ಲಿ ಯಶಸ್ವಿನಿ ಫಲಾನುಭವಿಗಳು ಹೊರರೋಗಿ ಸಲಹೆಯನ್ನು ರೂ 100 ಗಳನ್ನು ಸಾಮಾನ್ಯ ಪರೀಕ್ಷೆಗೆ ಮತ್ತು ವಿಶೇಷ ತಜ್ಙರಿಂದ ಪರೀಕ್ಷೆ ಮಾಡಿಸಿಕೊಳ್ಳಲು ರೂ.200ಗಳನ್ನು ಪಾವತಿಸಿ ಮೂರು ತಿಂಗಳವರೆಗೆ ಅದೇ ಕಾರ್ಡ್ನಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ಯಶಸ್ವಿನಿ ಕಾರ್ಡ್ದಾರರು ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಕ್ಲಿನಿಕ್ ಅಥವಾ ಇನ್ನಾವುದೇ ಇನ್ವೆಸ್ಟಿಗೇಷನ್ ಗಳನ್ನು ಶೇ 25 ರಿಯಾಯಿತಿ ದರದಲ್ಲಿ ಪಡೆಯಬಹುದು.
ಇದನ್ನೂ ಓದಿ:ಈ ವರ್ಷ ಸರಿಯಾದ ಆಹಾರ ಅಷ್ಟೇ ಅಲ್ಲ, ಬುದ್ದಿವಂತಿಕೆಯಿಂದ ನಿಮ್ಮಿಷ್ಟದ ತಿನಿಸು ಸವಿಯಿರಿ