ದಾವೋಸ್: ವಿಶ್ವ ಆರ್ಥಿಕ ಫೋರಂ ಸಮಾವೇಶದ 3ನೇ ದಿನವಾದ ಇಂದು ಕರ್ನಾಟಕದ ಪಾಲಿಗೆ ವರದಾನವಾಗುವ ನಿರೀಕ್ಷೆ ಹುಟ್ಟಿಸಿದೆ. ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಷ್ಠಿತ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.
ತಮ್ಮನ್ನು ಭೇಟಿಯಾದ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರವು ಹೂಡಿಕೆದಾರರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಿದೆ ಹಾಗೂ ಎಲ್ಲ ಅಡಚಣೆಗಳನ್ನು ನಿವಾರಿಸಲಿದೆ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಬೆಂಗಳೂರಿನಲ್ಲಿ ಅಸ್ತಿತ್ವ ಹೊಂದಿರುವ ದಸ್ಸಾ ಸಿಸ್ಟಮ್ಸ್ 3ಡಿಎಸ್ ಅವರಿಂದ ಹೂಡಿಕೆಯ ಕುರಿತು ಅತ್ಯಂತ ಭರವಸೆಯ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಳ್ಳಾರಿಯಲ್ಲಿ ಮಿತ್ತಲ್ ಸ್ಟೀಲ್ ಆರಂಭಕ್ಕೆ ಅವಕಾಶ: ಉಕ್ಕಿನ ಕೈಗಾರಿಕೆಗಳ ಪ್ರಮುಖ ಉದ್ಯಮಿ ಲಕ್ಷ್ಮಿ ಎನ್.ಮಿತ್ತಲ್ ನಿನ್ನೆ ರಾತ್ರಿ ನಡೆದ ಸಿಐಐ ಭೋಜನ ಕೂಟದ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದರು. ಇಂದು ಬೆಳಗ್ಗೆಯೂ ಕರ್ನಾಟಕ ಪೆವಿಲಿಯನ್‌ಗೆ ಆಗಮಿಸಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಚರ್ಚಿಸಿದರು. ಅವರ ಕಂಪನಿಯು ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 3000 ಎಕರೆ ಭೂಮಿ ಹೊಂದಿದೆ.
'2010ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಉಕ್ಕು ತಯಾರಿಕಾ ಘಟಕ ಸ್ಥಾಪನೆಗೆ ಅನುಮತಿ ನೀಡಿದ್ದು, ಕಾರಣಾಂತರಗಳಿಂದ ಇದಕ್ಕೆ ಅಡಚಣೆಗಳು ಉಂಟಾಗಿವೆ. ಈಗ ತಾವು ಎಲ್ಲ ಅಡ್ಡಿ ಆತಂಕಗಳನ್ನು ನಿವಾರಿಸಿ ಎಂದು ಮನವಿ ಮಾಡಿದರು. ಕರ್ನಾಟಕದಲ್ಲಿ ಸೌರ ವಿದ್ಯುತ್ ಸ್ಥಾವರದಲ್ಲಿ ಹೂಡಿಕೆ ಮಾಡುವುದಾಗಿ ತಿಳಿಸಿದರು. ಲುಲು ಗ್ರೂಪ್ ಅಧ್ಯಕ್ಷ ಯೂಸುಫ್ ಅಲಿ ಅವರು ಕರ್ನಾಟಕದಲ್ಲಿ ಸರಕು ಸಾಗಾಣಿಕೆ ವಲಯದಲ್ಲಿ 2000 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದರು.
ಈ ಸಂಸ್ಥೆಯು ವಿಶೇಷವಾಗಿ ಕೃಷಿ ಉತ್ಪನ್ನ ಹಾಗೂ ಶೀಘ್ರ ಕೊಳೆತು ಹೋಗುವ ತರಕಾರಿ, ಆಹಾರ ವಸ್ತುಗಳು, ಹಣ್ಣು ಹಂಪಲು ಹಾಗೂ ಪುಷ್ಪಗಳ ಸಾಗಾಣಿಕೆಗೆ ಹೂಡಿಕೆ ಮಾಡಲಿದೆ. ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಸಹ ಈ ಸಭೆಯಲ್ಲಿ ಭಾಗವಹಿಸಿದ್ರು.