ಬೆಂಗಳೂರು: ಗೋರಕ್ಷಣೆ ಕಾಯ್ದೆಯನ್ನು ಬಿಜೆಪಿ ಅನುಷ್ಠಾನಕ್ಕೆ ತಂದರೆ ಕಾಂಗ್ರೆಸ್‍ನವರು ಅದನ್ನು ವಿರೋಧಿಸಿದರು. ನಮಗೆ ಹಾಲು, ಮೊಸರು, ಹಸುವಿನ ತುಪ್ಪ, ಸಗಣಿ ಬೇಕು. ಆದರೆ ವಯಸ್ಸಾದ ಗೋವುಗಳು ಬೇಡ ಎಂಬ ಕಾಂಗ್ರೆಸ್ ಧೋರಣೆ ಅತ್ಯಂತ ದೇಶ ವಿರೋಧಿಯಲ್ಲವೇ? ಇಂಥ ವಿಚಾರಗಳನ್ನು ನಾವು ಮನೆ ಮನೆಗೆ ತಲುಪಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರೈತ ಮೋರ್ಚಾ ಪ್ರಭಾರಿ ಎನ್. ರವಿಕುಮಾರ್ ಮನವಿ ಮಾಡಿದರು.
ಬಿಜೆಪಿ ರೈತ ಮೋರ್ಚಾವತಿಯಿಂದ “ಕರ್ನಾಟಕ ಗೋ ಉತ್ಪನ್ನಗಳ ಹಾಗೂ ಗೋ ತ್ಯಾಜ್ಯಗಳ ಮೌಲ್ಯವರ್ಧನೆ” ಕುರಿತ ಕಾರ್ಯಾಗಾರವನ್ನು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ರವಿಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗೋವಿನ ಉತ್ಪನ್ನಗಳ ರಫ್ತಿನಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಹಾಲು ಉತ್ಪಾದಕರಿಗೆ ಬೆಂಬಲ ಬೆಲೆ ಕೊಟ್ಟ, ರೈತ ಬಜೆಟ್ ನೀಡಿದ ಯಡಿಯೂರಪ್ಪ ಅವರನ್ನು ನಾವು ಅಭಿನಂದಿಸಬೇಕು. ರೈತರಿಗೆ ಶಕ್ತಿ ತುಂಬಿಸುವ, ಪ್ರೋತ್ಸಾಹಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಬಿಜೆಪಿ ರೈತಪರ: ಫಸಲ್ ಬಿಮಾ ಯೋಜನೆಯಡಿ ಕಟ್ಟಿದ್ದ ವಿಮೆಗೆ ಬದಲಾಗಿ 20 ಪಟ್ಟು ಹೆಚ್ಚು ಹಣ ರೈತರಿಗೆ ಸಿಗುತ್ತಿದೆ. 2023ನ್ನು ಸಿರಿಧಾನ್ಯ ವರ್ಷವಾಗಿ ಕೇಂದ್ರ ಸರಕಾರ ಪ್ರಕಟಿಸಿದೆ. ಸಿರಿಧಾನ್ಯ ಬೆಳೆದು ಆದಾಯ ದ್ವಿಗುಣಗೊಳಿಸಬೇಕು ಎಂಬುದೇ ಇದರ ಉದ್ದೇಶ ಎಂದು ವಿವರಿಸಿದರು. ರೈತರಿಗೆ ಅತಿ ಹೆಚ್ಚು ಸಾಲವನ್ನು ಬೊಮ್ಮಾಯಿಯವರ ಸರ್ಕಾರ ಕೊಟ್ಟಿದೆ.
ಕಡಿಮೆ ಭೂಮಿ ಹೊಂದಿದ್ದ ಮತ್ತು ಸಂಕಷ್ಟದಲ್ಲಿದ್ದ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಯನ್ನು ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅದಕ್ಕೆ ಧ್ವನಿಗೂಡಿಸಿ 4 ಸಾವಿರ ರೂಪಾಯಿ ಯಡಿಯೂರಪ್ಪ ನೀಡಿದ್ದಾರೆ. ಈ ಮೂಲಕ 5 ವರ್ಷಗಳಿಗೆ 50 ಸಾವಿರ ರೂಪಾಯಿ ಲಭಿಸುವಂತಾಗಿದೆ. ಇದು ಬಿಜೆಪಿ ರೈತಪರ ಎಂಬುದನ್ನು ಸಾಬೀತು ಮಾಡಿದೆ ಎಂದು ರವಿಕುಮಾರ್ ತಿಳಿಸಿದರು.
ಮುಂದುವರಿದು, ಕಳಸಾ ಬಂಡೂರಿ ಯೋಜನೆಗೆ ಕಾಂಗ್ರೆಸ್ ವಿರೋಧವಿದೆ. ಸೋನಿಯಾ ಗಾಂಧಿ ಅವರು ಈ ಬಗ್ಗೆ ತಿಳಿಸಿದ್ದರು. ನಾವು ಅದನ್ನು ಮಾತ್ರವಲ್ಲದೇ ಮೇಕೆದಾಟು ಯೋಜನೆ ಜಾರಿಗೊಳಿಸಲಿದ್ದೇವೆ. ಚಿತ್ರದುರ್ಗದ ಅಪ್ಪರ್ ಭದ್ರಾ ಯೋಜನೆಯನ್ನೂ ರಾಷ್ಟ್ರೀಯ ಯೋಜನೆಯಾಗಿ ಕೇಂದ್ರವು ಜಾರಿಗೊಳಿಸಲಿದ್ದು, 16 ಸಾವಿರ ಕೋಟಿ ಅನುದಾನ ಸಿಗಲಿದೆ.
ನರೇಂದ್ರ ಮೋದಿಯವರು ಇದಕ್ಕಾಗಿ ಅಭಿನಂದನಾರ್ಹರು ಎಂದು ಹೇಳಿದರು. ಅಪ್ಪರ್ ಭದ್ರಾಕ್ಕೆ ಕಾಂಗ್ರೆಸ್ ಗುಲಗುಂಜಿಯಷ್ಟೂ ಕೊಡುಗೆ ಕೊಟ್ಟಿಲ್ಲ. ಅಪ್ಪರ್ ಭದ್ರಾ ಎಂದರೆ ಬಿಜೆಪಿ. ಬಿಜೆಪಿ ಎಂದರೆ ಅಪ್ಪರ್ ಭದ್ರಾ ಎಂದು ನುಡಿದರು. ಗೋವುಗಳ ಕುರಿತು ಮಾತನಾಡಲು ನೈತಿಕ ಧ್ವನಿ ಇರುವುದು ಬಿಜೆಪಿಗೆ ಮಾತ್ರ , ಸಿದ್ದರಾಮಯ್ಯ “ಗೋಮಾಂಸ ತಿಂತೀನಿ ಏನ್ಮಾಡ್ತೀರಿ” ಎಂದು ಕೇಳಿದ್ದರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅವರಿಗೆ ಬುದ್ಧಿ ಕಲಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ಪಾಳೇಕರ್ ಮಾದರಿ ಅನುಸರಿಸಬೇಕು: ಮುಂದೆ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬಂಡೆವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಂಡ ಬಿಜೆಪಿ ಸರಕಾರಗಳು ಜಾನುವಾರುಗಳಿಗೆ ಗಂಟು ರೋಗ ನಿಯಂತ್ರಣಕ್ಕೆ ಕೂಡ ಪ್ರಯತ್ನಿಸಿವೆ. ಗಾಣದೆಣ್ಣೆ, ಹಿಂಡಿ ಮೂಲಕ ಮೌಲ್ಯವರ್ಧನೆ ಸಾಧ್ಯವಿದೆ. ಇಂಥ ಹಿಂಡಿಯಿಂದ ಹೆಚ್ಚು ಹಾಲು ಸಿಗುತ್ತದೆ. ಹಿಂದಿನ ಕೃಷಿ ಪರಂಪರೆಯತ್ತ ನಾವು ನಡೆಯಬೇಕಿದೆ. ಪಾಳೇಕರ್ ಅವರ ಮಾದರಿಯನ್ನು ನಾವು ಅನುಸರಿಸಬೇಕು. ಅನುಭವಿಗಳಿಂದ ವಿವರ ತಿಳಿದು ಅದನ್ನು ಅನುಷ್ಠಾನಕ್ಕೆ ತರುವಂತೆ ಕಿವಿಮಾತು ಹೇಳಿದರು.
ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಮಾತನಾಡಿ, ಕೇಂದ್ರ- ರಾಜ್ಯ ಬಿಜೆಪಿ ಸರಕಾರಗಳ ಜನಪರ ಮತ್ತು ರೈತಪರ ಕಾರ್ಯಗಳನ್ನು ಮೋರ್ಚಾವು ಜನರಿಗೆ ತಲುಪಿಸಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಗುರುಲಿಂಗನಗೌಡ, ಕಾರ್ಯದರ್ಶಿ ಡಾ.ನವೀನ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಬಿಜೆಪಿಯವರಿಂದ ರೌಡಿ ಮೋರ್ಚಾ ಆರಂಭ: ಎಂ ಲಕ್ಷ್ಮಣ್