ಬೆಂಗಳೂರು: ಮಹಿಳೆಯರು ಸಂಸಾರ ಹಾಗೂ ಸಮಾಜದಲ್ಲಿ ಸಮಾನ ಪಾತ್ರ ವಹಿಸುವ ಮೂಲಕ ಮಹಿಳಾ ಸಾಧಕಿ ಎಂಬ ಬಿರುದು ಪಡೆದಿದ್ದಾರೆ ಎಂದು ಮೈಸೂರು ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ನಡೆದ ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು. ಅನಾದಿ ಕಾಲದಿಂದಲೂ ಮಹಿಳೆಗೆ ಅತ್ಯಂತ ಗೌರವ ಹಾಗೂ ಉನ್ನತ ಸ್ಥಾನ ನೀಡಲಾಗಿದೆ ಎಂದರು.
ಮಹಿಳೆ, ಮೀಸಲು ನೀತಿಯನ್ನ ನಂಬಿಕೊಳ್ಳದೇ ಹೆಚ್ಚು ಕೆಲಸ ಮಾಡಬೇಕು. ಪ್ರತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆ ಮುಂದುವರೆಯಬೇಕು ಎಂದು ತಿಳಿಸಿದರು.
ಗೈಡ್ಸ್ ರಾಜ್ಯ ಸಹಾಯಕ ಆಯುಕ್ತೆ ಭಾಗ್ಯಲಕ್ಷ್ಮಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಉತ್ತಮ ಸಮಾಜ ಹಾಗೂ ಆರೋಗ್ಯಕರ ಕುಟುಂಬಕ್ಕೆ ಮಹಿಳೆಯರ ಶ್ರಮ ಬಹುಮುಖ್ಯ ಎಂದರು.