ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಯೊಂದಿಗೆ ಸ್ನೇಹ ಸಂಪಾದಿಸಿದ್ದಾನೆ. ಆ ಬಳಿಕ ಮಹಿಳೆ ವಿಶ್ವಾಸ ಗಳಿಸಿ ಮದುವೆಯಾಗುವುದಾಗಿ ನಂಬಿಸಿ ಕೊನೆಗೆ ಕೈಕೊಟ್ಟಿದ್ದಾನೆ. ಈ ಸಂಬಂಧ ಸಂತ್ರಸ್ತೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.
ಮಾರುತಿ ನಗರದ ನಿವಾಸಿ ಸಂತ್ರಸ್ತೆ ಚಲನಚಿತ್ರ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, 2018ರಲ್ಲಿ ಫೇಸ್‌ಬುಕ್‌ನಲ್ಲಿ ವಿಜಯಪ್ರಸಾದ್ ಎಂಬುವವರ ಪರಿಚಯ ಮಾಡಿಕೊಂಡಿದ್ದರು. ಇದಾದ ಬಳಿಕ ಆತ ನಿತ್ಯ ಫೇಸ್‌ಬುಕ್‌ನಲ್ಲಿ ಸಂತ್ರಸ್ತ ಮಹಿಳೆಗೆ ಸಂದೇಶ ಕಳುಹಿಸಿ ವಿವಾಹವಾಗುವುದಾಗಿ ನಂಬಿಸಿ ಪ್ರೇಮ ನಿವೇದನೆ ಮಾಡಿದ್ದನಂತೆ. ಆತನ ಮಾತಿಗೆ ಮರುಳಾಗಿ ನಿರ್ದೇಶಕಿ ಒಪ್ಪಿಗೆ ಸೂಚಿಸಿದ್ದರು.
ಈ ನಡುವೆ ವಿಜಯಪ್ರಸಾದ್ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದನಂತೆ. ಅಲ್ಲದೇ ವಿವಾಹ ಆಗುವುದಾಗಿ ನಂಬಿಸಿ ಹಲವು ಬಾರಿ ಇದೇ ರೀತಿ ಮಾಡಿದ್ದಾನೆ ಎನ್ನುವುದು ಮಹಿಳೆಯ ಆರೋಪ. ಕೆಲ ಸಮಯದ ಬಳಿಕ ವಿವಾಹವಾಗುವಂತೆ ಸಂತ್ರಸ್ತೆ ಒತ್ತಾಯಿಸಿದ್ದಾಳೆ. ಈ ವೇಳೆ, ಆರೋಪಿ ತನಗೆ ಮನೆಯಲ್ಲಿ ಬೇರೆ ಮದುವೆ ಮಾಡಲು ಹುಡುಗಿ ನೋಡುತ್ತಿದ್ದಾರೆ. ಮನೆಯವರು ನೋಡಿದ ಯುವತಿಯನ್ನೇ ವಿವಾಹವಾಗುವುದಾಗಿ ಹೇಳಿದ್ದಾನೆ.
ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ನಂತರ ಆರೋಪಿ ವಿವಾಹವಾಗಲು ಒಪ್ಪಿ ತಾನು ಪ್ರೀತಿಸುತ್ತಿರುವ ವಿಚಾರವನ್ನು ಬೇರೆಯವರ ಬಳಿ ಹಂಚಿಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ. ಆತನ ಒತ್ತಾಯದ ಮೇರೆಗೆ ಸೊಣ್ಣೇನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿ ಪರಿಚಿತರ ಮೂಲಕ ವಿವಾಹ ದಿನಾಂಕವನ್ನೂ ನಿಗದಿ ಪಡಿಸಲಾಗಿತ್ತಂತೆ.
ಆದರೆ, ಆರೋಪಿ ಹಲವು ನೆಪ ಹೇಳಿ ವಿವಾಹ ದಿನಾಂಕ ಮುಂದೂಡಿದ್ದ. ಅಷ್ಟು ಮಾತ್ರವಲ್ಲದೇ ಕಳೆದ ಜನವರಿ 12 ರಂದು ಮನೆಗೆ ಬಂದು ಲೈವ್ ಬ್ಯಾಂಡ್ ನಡೆಸಲು 5 ಲಕ್ಷ ರೂ. ಕೊಡುವಂತೆ ಕೇಳಿದ್ದ. ಈ ವೇಳೆ, ಸಂತ್ರಸ್ತೆ 1ಲಕ್ಷ ಹಣ ಕೊಟ್ಟು ಉಳಿದ ಹಣ ಕೊಡಲು ನಿರಾಕರಿಸಿದ್ದಳು. ಹೀಗಾಗಿ ಆರೋಪಿ ಸಂಜೆ ಮತ್ತೆ ಬರುವುದಾಗಿ ಹೇಳಿ ಹೋದವನು ಮತ್ತೆ ಸಂತ್ರಸ್ತೆ ಬಳಿ ಹೋಗಿಲ್ಲ.
ಇದರಿಂದಾಗಿ ಸಂತ್ರಸ್ತ ಮಹಿಳೆ ಕಂಗಾಲಾಗಿ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.