ಬೆಂಗಳೂರು: ಆನೇಕಲ್‌ನಲ್ಲಿ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಉಚಿತವಾಗಿ ವಿತರಿಸುವ ರಾಜ್ಯ ಸರ್ಕಾರದ ಮುದ್ರೆಯ ಸಕ್ಕರೆ ಇತರೆ ಪದಾರ್ಥಗಳ ಪೊಟ್ಟಣ ಬದಲಿಸಿ, ಬಿಜೆಪಿ ಪಕ್ಷದ ಚಿನ್ನೆ ಇರುವ ಕವರ್ ಹಾಕಿ ಹಂಚಲು ತಯಾರಿ ನಡೆಸಿದ್ದು ಅತ್ಯಂತ ನಾಚಿಕೆಗೇಡು ಎಂದು ಮಹಿಳಾ ಕಾಂಗ್ರೆಸ್ ಆರೋಪಿಸಿ, ಅಧ್ಯಕ್ಷೆ ಡಾ. ಪುಷ್ಪಾ ಅಮರ್ನಾಥ್ ನೇತೃತ್ವದಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಯತ್ನ ನಡೆಸಲಾಯಿತು.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸಮಾವೇಶಗೊಂಡ ಮಹಿಳಾ ಕಾಂಗ್ರೆಸ್ ನಾಯಕಿಯರು ಸಭೆ ನಡೆಸಿ, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಹಾಗೂ ಸಿಎಂಗೆ ಮನವಿ ಪತ್ರ ಸಲ್ಲಿಸುವ ನಿರ್ಧಾರ ಕೈಗೊಂಡರು. ಕಾಂಗ್ರೆಸ್ ಭವನದಿಂದ ಸಿಎಂ ನಿವಾಸ ಕಾವೇರಿಯತ್ತ ಹೊರಟ ಮಹಿಳಾ ಕಾಂಗ್ರೆಸ್ ನಾಯಕಿಯರು, ಕಾರ್ಯಕರ್ತರನ್ನು ಶಿವಾನಂದ ವೃತ್ತ ಬಳಿ ತಡೆದ ಪೊಲೀಸರು ಮುಂದೆ ತೆರಳಲು ಅವಕಾಶ ನೀಡದೇ ಬಂಧಿಸಿ ಕರೆದೊಯ್ದರು.
ಪುಷ್ಪಾ ಅಮರನಾಥ್ ಆರೋಪ:
ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಲಾಕ್ಡೌನ್ ಹಿನ್ನೆಲೆ ಗರ್ಭಿಣಿ ಸ್ತ್ರೀಯರು, ಮಕ್ಕಳು ಮತ್ತು ಜನಸಾಮಾನ್ಯರಿಗೆ ಹಂಚಲು ತಂದಿದ್ದ ಆಹಾರ ಪದಾರ್ಥಗಳನ್ನು ಬಿಜೆಪಿ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವ ಅನಾಗರಿಕ ಹಾದಿ ಹಿಡಿದಿದೆ. ಇಂತಹ ಜನವಿರೋಧಿ ಕೃತ್ಯವನ್ನು ನಮ್ಮ ಪಕ್ಷದ ಸಂಸದರಾದ ಡಿ.ಕೆ.ಸುರೇಶ್, ಆನೇಕಲ್ ಶಾಸಕ ಶಿವಣ್ಣ, ಮಾಧ್ಯಮ ವಿಭಾಗದ ಮುಖ್ಯಸ್ಥರಾದ ವಿ.ಎಸ್. ಉಗ್ರಪ್ಪ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಖಂಡ ಆರ್.ಕೆ. ರಮೇಶ್ ತಪ್ಪಿತಸ್ಥರನ್ನು ಸಾಕ್ಷಿ ಸಮೇತ ಹಿಡಿದು ಜನತಾ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಸ್ವಲ್ಪವಾದರೂ ನೈತಿಕತೆ ಇದ್ದರೆ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಮಕ್ಕಳು, ಮಹಿಳೆಯರಿಗೆ ಕೊಡಬೇಕಾದ ಪದಾರ್ಥಗಳ ದುರುಪಯೋಗದಲ್ಲಿ ತೊಡಗಿರುವ ಬಿಜೆಪಿ ಕಾರ್ಯಕರ್ತರನ್ನು ಮುಖ್ಯಮಂತ್ರಿ ಯಡಿಯೂರಪ್ಪ ನವರು ನಿರ್ದಾಕ್ಷಿಣ್ಯವಾಗಿ ದಂಡಿಸಿ ರಾಜ್ಯದ ಜನರಿಗೆ ನ್ಯಾಯ ಒದಗಿಸಬೇಕು. ಮಹಿಳೆಯರ, ಮಕ್ಕಳ ಆಹಾರಕ್ಕೆ ರಾಜಕೀಯ ಲೋಪ ಮಾಡಿದ ಬಿಜೆಪಿ ನಾಯಕರು ಕಳೆದ ವಾರ ಅಕ್ಕಿಯ ಅಕ್ರಮ ಸಂಗ್ರಹ, ಮಾರಾಟವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಬಯಲು ಮಾಡಿದ್ದಾರೆ. ಆದರೆ ಸರ್ಕಾರ ಶ್ರಮವಹಿಸಿ ಅದನ್ನ ಮುಚ್ಚಿಹಾಕಲು ಯತ್ನಿಸಿದೆ ಎಂದು ಆರೋಪಿಸಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಬಡವರ ಅನ್ನಕ್ಕೆ ಕನ್ನ ಹಾಕಿದ್ದಾರೆ. ಈ ವಿಚಾರದಲ್ಲಿ ಯಡಿಯೂರಪ್ಪ ಕಣ್ಣು ಮುಚ್ಚಿ ಕುಳಿತಿದ್ದಾರೆ ಹಾಗಾಗಿ ಯಡಿಯೂರಪ್ಪ ಕೂಡ ರಾಜೀನಾಮೆ ನೀಡಬೇಕು. ದೀಪ ಹಚ್ಚುವುದು, ಗಂಟೆ ಹೊಡೆಯುವುದರ ಮೂಲಕ ಹೊಟ್ಟೆ ತುಂಬಲ್ಲ ಎಂದರು.
ಮಾಜಿ ಸಚಿವೆ ಡಾ. ಜಯಮಾಲಾ ಮಾತನಾಡಿ, ಪ್ರಪಂಚ ಕೊರೊನಾದಿಂದ ಭಯಗೊಂಡಿದೆ. ಇವತ್ತಿನ ರಾಜಕಾರಣ ನೋಡಿದರೆ ನಾಚಿಕೆಯಾಗುತ್ತೆ. ನೀವು ಮನುಷ್ಯರೇನ್ರೀ? ಮಕ್ಕಳಿಗಾಗಿ ನೀಡೋ ಆಹಾರವನ್ನ ದುರುಪಯೋಗ ಮಾಡಿಕೊಂಡಿದ್ದೀರ. ಬಾಣಂತಿಯರಿಗೆ ನೀಡುವ ಆಹಾರವನ್ನ ತಿಂದಿದ್ದೀರ. ಅವರಿಗೆ ಕೊಡೊ ಪಾಕೆಟ್ ಮೇಲೆ ನಿಮ್ಮ ಪಾರ್ಟಿ ಸಿಂಬಲ್ ಹಾಕ್ತಿರ. ನಿಮ್ಮ ಪಾರ್ಟಿ ಬೆಳೆಸೋಕೆ ಈ ಕೆಲಸ ಮಾಡಬೇಕಾ? ಥೂ ನಿಮಗೆ ನಾಚಿಕೆಯಾಗಬೇಕು. ಅಂಗನವಾಡಿ ಆಹಾರ ದುರುಪಯೋಗವಾಗ್ತಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿ, ಮುಖಂಡರ ವಿರುದ್ಧ ಶಿಸ್ತು ಕ್ರಮವಾಗಬೇಕು ಎಂದು ಆಗ್ರಹಿಸಿದ ಮಾಜಿ ಸಚಿವೆ ಉಮಾಶ್ರೀ, ಮಕ್ಕಳ ಆಹಾರ ದುರುಪಯೋಗ ಸರಿಯೇ? ಮಹಿಳಾ ಮಕ್ಕಳಕಲ್ಯಾಣ ಸಚಿವೆ ಏನ್ಮಾಡ್ತಾರೆ? ಇದ್ರ ಬಗ್ಗೆ ಯಾಕೆ ಕ್ರಮ ತೆಗೆದುಕೊಳ್ತಿಲ್ಲ? ಭಾಗ್ಯಲಕ್ಷ್ಮಿ ಬಾಂಡ್ ಸರಿಯಾಗಿ ವಿತರಣೆ ಮಾಡ್ತಿಲ್ಲ. ಹೀಗಾಗಿ ಎಲ್ ಐಸಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ಫುಡ್ ಕಿಟ್ ಹಂಚಿಕೆಯಲ್ಲಿ ತಾರತಮ್ಯ ಮಾಡ್ತಿದ್ದೀರ. ಹಿಂದೆ 500 ರಿಂದ 600 ಕೋಟಿ ಇಲಾಖೆಗೆ ನೀಡಿದ್ರು. ಸಿದ್ದರಾಮಯ್ಯ ಅವಧಿಯಲ್ಲಿ ಮಹಿಳಾ ಕಲ್ಯಾಣ ಇಲಾಖೆಗೆ ನೀಡಿದ್ರು. ಈಗ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಎಷ್ಟು ನೀಡಿದ್ದಾರೆ? ಎಂದು ಪ್ರಶ್ನಿಸಿದರು. ಮಾಜಿ ಸಚಿವೆ ರಾಣಿ ಸತೀಶ್, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.