ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ನಲ್ಲಿ ಹಣ ಕೊಡದೆ ಕಡತ ವಿಲೇವಾರಿ ಆಗಲ್ಲ: ವೈ.ಎ. ನಾರಾಯಣಸ್ವಾಮಿ - Y A Narayana swamy talk about corruption in vidhana souda
ಸಚಿವಾಲಯದಲ್ಲಿ ಕಡತ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಪೊಲೀಸ್ ಇತ್ಯಾದಿ ಇಲಾಖೆಗೆ ವರ್ಗಾವಣೆ ಕಾನೂನು ಇದೆ. ಆದರೆ, ಸಚಿವಾಲಯದ ನೌಕರರಿಗೆ ಇಂತಹ ನೀತಿ ಏಕಿಲ್ಲ? ಎಂದು ಆಡಳಿತ ಪಕ್ಷದ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್ ಬಿಲ್ಡಿಂಗ್ನಲ್ಲಿ ಹಣ ಕೊಡದೆ ಯಾವುದೇ ಕಡತಗಳ ವಿಲೇವಾರಿಯಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸಚಿವಾಲಯದ ನೌಕರರಿಗೆ ವರ್ಗಾವಣೆ ಕಾನೂನು ಇಲ್ಲದ ಕಾರಣ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆಡಳಿತ ಪಕ್ಷದ ಸದಸ್ಯ ವೈ.ಎ. ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿ, ಸಚಿವಾಲಯದಲ್ಲಿ ಕಡತ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಪೊಲೀಸ್ ಇತ್ಯಾದಿ ಇಲಾಖೆಗೆ ವರ್ಗಾವಣೆ ಕಾನೂನು ಇದೆ. ಆದರೆ, ಸಚಿವಾಲಯದ ನೌಕರರಿಗೆ ಇಂತಹ ನೀತಿ ಏಕಿಲ್ಲ?, ಇವರೆಲ್ಲಾ ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಧಿಕಾರ ಬಳಸಿಕೊಂಡು ಒಂದೇ ಇಲಾಖೆಯಲ್ಲಿ ಕುಳಿತಿದ್ದಾರೆ. ಇವರನ್ನು ನಿಯಂತ್ರಿಸುವವರು ಯಾರು? ಸಕಾಲ ಇವರಿಗೆ ಅನ್ವಯ ಆಗಲಿದೆಯೋ, ಇಲ್ಲವೋ?. ಹಣ ಕೊಡದೆ ಇದ್ದಲ್ಲಿ ವಿಧಾನಸೌಧ, ವಿಕಾಸಸೌಧ ಎಂಎಸ್ ಬಿಲ್ಡಿಂಗ್ ನಲ್ಲಿ ಯಾವ ಫೈಲ್ ಕೂಡಾ ಮೂವ್ ಆಗಲ್ಲ. ಪ್ರತಿಯೊಂದು ಕೆಲಸಕ್ಕೂ ಬಹಳ ಶ್ರಮ ಹಾಕಬೇಕು. ಇಲ್ಲದೇ ಇದ್ದಲ್ಲಿ ಅಧಿಕಾರಿಗಳು ಕಡತ ವಿಲೇವಾರಿ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಪಕ್ಷದ ಸದಸ್ಯ ನಾರಾಯಣಸ್ವಾಮಿ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸ್ವಾಗತಿಸಿದರು. ಸರ್ಕಾರದ ಸ್ಥಿತಿ ಹೇಗಿದೆ ಎನ್ನುವುದಕ್ಕೆ ಇದು ಉದಾಹರಣೆ. ನಾವು ಆರೋಪ ಮಾಡಿದರೆ ರಾಜಕಾರಣ ಮಾಡುತ್ತಿದ್ದೇವೆ ಎನ್ನಬಹುದು. ಆದರೆ, ಆಡಳಿತ ಪಕ್ಷದ ಸದಸ್ಯರಾದ ನಾರಾಯಣಸ್ವಾಮಿ, ಹೆಚ್. ವಿಶ್ವನಾಥ್ ಅವರೇ ಈಗ ಹಣ ನೀಡದೆ ಕೆಲಸ ಆಗಲ್ಲ ಎನ್ನುವ ಸ್ಥಿತಿ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ ಎಂದು ಸರ್ಕಾರದ ಕಾಲೆಳೆದರು.
ಓದಿ: ಲೋಕಸಭೆ, ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ: ಸಿಎಂ ಯಡಿಯೂರಪ್ಪ
ನಂತರ ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಸಿಎಂ ಪರ ಉತ್ತರ ನೀಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಸಕಾಲ ಸಚಿವಾಲಯದ ಸಿಬ್ಬಂದಿಗೂ ಅನ್ವಯವಾಗಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ವರ್ಗಾವಣೆ ಕುರಿತ ಪ್ರಸ್ತಾಪದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ವಿಧಾನಸೌಧ, ವಿಕಾಸಸೌಧ ಹಾಗು ಎಂಎಸ್ ಬಿಲ್ಡಿಂಗ್ ಚಲನವಲನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.