ಬೆಂಗಳೂರು: ಅನೈತಿಕ ಸಂಬಂಧವಿದೆ ಎಂದು ಪದೇ ಪದೇ ಅನುಮಾನಿಸುತ್ತಿದ್ದ ಗಂಡನನ್ನು ತನ್ನ ಅಕ್ಕನ ಮಗನ ಸಹಾಯದಿಂದ ಬೆಂಗಳೂರಿನಲ್ಲಿ ಕೊಂದು ಶವವನ್ನು ಊರಿಗೆ ಕೊಂಡೊಯ್ದು ನಾಟಕವಾಡಿದ ಹೆಂಡತಿಯನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ. ಶಿಲ್ಪಾ ಬಂಧಿತ ಮಹಿಳೆ. ಮಹೇಶ್ ಕೊಲೆಯಾದವರು.
ಪತ್ನಿಯ ಶೀಲ ಶಂಕಿಸಿದ ಪತಿ ಕೊಲೆ: ಮಂಡ್ಯ ಮೂಲದ ಮಹೇಶ್ ಮತ್ತು ಶಿಲ್ಪಾಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ದಂಪತಿ ವಾಸವಾಗಿದ್ದರು. ಇತ್ತೀಚಿಗೆ ಶಿಲ್ಪಾ ಬೆಂಗಳೂರಲ್ಲಿ ವಾಸವಿದ್ರೆ ಕೆಲಸದ ನಿಮಿತ್ತ ಮಹೇಶ್ ಮಂಡ್ಯದಲ್ಲಿ ವಾಸವಿದ್ದ. ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ದ ಮಹೇಶ್ ಕುಡಿದು ನಿನಗೆ ಅನೈತಿಕ ಸಂಬಂಧ ಇದೆ ಎಂದು ಶಿಲ್ಪಾಗೆ ಕಾಟ ನೀಡುತ್ತಿದ್ದ. ಬೇಸತ್ತ ಶಿಲ್ಪಾ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು. ಕಳೆದ ಗುರುವಾರವೂ ಶಿಲ್ಪಾಳನ್ನ ಭೇಟಿಯಾಗಲು ಬಂದು ಗಲಾಟೆ ಮಾಡುತ್ತಿದ್ದ ಅಳಿಯನಿಗೆ ಬುದ್ಧಿವಾದ ಹೇಳುವಂತೆ ಶಿಲ್ಪಾಳ ತಾಯಿ ತನ್ನ ಹಿರಿಯ ಮಗಳ ಮಗ ಬಾಲಾಜಿಗೆ ಹೇಳಿದ್ದಳು.
ಬುದ್ಧಿ ಹೇಳಲು ಬಂದಿದ್ದ ಬಾಲಾಜಿ ಸಿಟ್ಟಿನಿಂದ ಮಹೇಶ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದ. ಈ ವೇಳೆ ಮಹೇಶ್ ಮೃತಪಟ್ಟಿದ್ದ. ಬಳಿಕ ಮೂರ್ಛೆ ರೋಗದಿಂದ ಮಹೇಶ್ ಸಾವನ್ನಪ್ಪಿದ್ದಾನೆ ಎಂದು ಮೃತದೇಹವನ್ನು ಶಿಲ್ಪಾ ಆತನ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಅನುಮಾನಗೊಂಡ ಮಹೇಶ್ ಪೋಷಕರು ಮಂಡ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿ ವಿಚಾರ ಬಯಲಾಗಿದೆ. ಕೊಲೆಗೆ ಸಹಕರಿಸಿದ ಶಿಲ್ಪಾ, ಆಕೆಯ ತಾಯಿಯನ್ನ ಮಂಡ್ಯ ಪೊಲೀಸರು ವಶಕ್ಕೆ ಪಡೆದು, ಪ್ರಕರಣವನ್ನು ಕೋಣನಕುಂಟೆ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ ಬಾಲಾಜಿ ತಲೆಮರೆಸಿಕೊಂಡಿದ್ದು ಶೋಧಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಅವಧಿಗೂ ಮೀರಿ ಪಾರ್ಟಿ: ಬೆಂಗಳೂರಿನ ಸ್ಟಾರ್ ಹೋಟೆಲ್ ಮೇಲೆ ತಡರಾತ್ರಿ ಸಿಸಿಬಿ ದಾಳಿ