ಬೆಂಗಳೂರು: ಹೈದರಾಬಾದ್ನಲ್ಲಿ ವೆಲ್ ಕಮ್ ಟು 40 ಪರ್ಸೆಂಟ್ ಸಿಎಂ ಎನ್ನುವ ಬ್ಯಾನರ್ ಅಳವಡಿಕೆ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದು, ತೆಲಂಗಾಣದಲ್ಲಿ ನಡೆದಿರುವ ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವನ್ನು ದೃಷ್ಟಿಯಲ್ಲಿರಿಸಿಕೊಂಡು ತೆಲಂಗಾಣದಲ್ಲಿಯೂ 40 ಶೇ. ಸರ್ಕಾರ ಎಂಬ ಫ್ಲೆಕ್ಸ್ಗಳನ್ನು ಅಳವಡಿಸಿರುವ ಕುರಿತು ನನಗೆ ಗೊತ್ತಿಲ್ಲ. ನಾನು ಅಲ್ಲಿಗೆ ಹೋಗಿಲ್ಲ, ಆದರೆ ಇದೊಂದು ವ್ಯವಸ್ಥಿತ ಷಡ್ಯಂತ್ರ. ನಮ್ಮ ರಾಜ್ಯದ ಬಗ್ಗೆ ತೆಲಂಗಾಣದಲ್ಲಿ ಹಾಕುವುದು ಎಷ್ಟು ಸಮಂಜಸ? ನಾವು ತೆಲಂಗಾಣದಲ್ಲಿ ಎಷ್ಟು ಕರಪ್ಷನ್ ಆಗುತ್ತಿದೆ ಅಂತಾ ಇಲ್ಲಿ ಹಾಕಿದರೆ ಎಷ್ಟು ಸಮಂಜಸವಾಗಲಿದೆ ಎಂದು ಪ್ರಶ್ನಿಸಿದರು.
ವೆಲ್ ಕಮ್ ಟು 40 ಪರ್ಸೆಂಟ್ ಸಿಎಂ ಎನ್ನುವ ಬ್ಯಾನರ್ ಅನ್ನು ಖಾಸಗಿಯವರು ಮಾಡಿದ್ದಾರೋ ಅಥವಾ ಸರ್ಕಾರ ಹಾಕಿರುವುದೋ ನನಗೆ ಗೊತ್ತಿಲ್ಲ. ಆದರೆ ಇಂತಹ ಬೆಳವಣಿಗೆಗಳು ಉಭಯರಾಜ್ಯಗಳ ಸೌಹಾರ್ದತೆಗೆ ಧಕ್ಕೆ ತರುತ್ತವೆ ಎಂದು ಹೇಳಿದರು.
ತೆಲಂಗಾಣ ವಿಮೋಚನಾ ದಿನಾಚರಣೆಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ತೆಲಂಗಾಣಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಅಮಿತ್ ಶಾ ಆಗಮನಕ್ಕೂ ಮೊದಲು ಮೈದಾನದಲ್ಲಿ ವೆಲ್ ಕಮ್ ಟು 40 ಸಿಎಂ ಎನ್ನುವ ಬರಹವುಳ್ಳ ಬೃಹತ್ ಬ್ಯಾನರ್ ಅಳವಡಿಸಲಾಗಿತ್ತು. ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪ ಉಲ್ಲೇಖಿಸಿ ಅಮಿತ್ ಶಾ ಅವರನ್ನು ಟೀಕಿಸಲು ಈ ಬ್ಯಾನರ್ ಬಳಸಿರಬಹುದು ಎನ್ನಲಾಗ್ತಿದೆ. ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಪಕ್ಷ ಈ ಬ್ಯಾನರ್ ಹಾಕಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : 1947ರಲ್ಲೇ ಭಾರತ ಸ್ವಾತಂತ್ರ್ಯ, ಹೈದರಾಬಾದ್ನಲ್ಲಿ ಈಗಲೂ ನಿಜಾಮ್ ಆಳ್ವಿಕೆ: ಅಮಿತ್ ಶಾ ಟೀಕೆ