ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಎದುರಿಸುವ ವೇಳೆ ನಮ್ಮಿಂದ ಲೋಪವಾಗಿದೆ. ಅದನ್ನು ಸರಿಪಡಿಸುವ ಪ್ರಕ್ರಿಯೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಸಂಘಟನೆಗೆ ಚುರುಕು ನೀಡಿ ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರೆಲ್ಲ ಮನೆಗೆ ಬಂದು ಮಾತನಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಅವರ ಅನುಭವ ಹೇಳುತ್ತಿದ್ದಾರೆ. ಎಲ್ಲವನ್ನೂ ಪಕ್ಷದ ಸಭೆಯಲ್ಲಿ ಸಮಾಲೋಚನೆ ಮಾಡಿ, ಏನೆಲ್ಲ ಸರಿಪಡಿಸಿಕೊಳ್ಳಬೇಕು, ಎಲ್ಲಿ ಲೋಪವಾಗಿದೆ ಎಂಬುದನ್ನು ತಿಳಿದು ಸರಿಪಡಿಸುವ ಪ್ರಕ್ರಿಯೆ ಮಾಡುತ್ತೇವೆ. ಕೆಲವೇ ದಿನಗಳಲ್ಲಿ ಪಕ್ಷ ಸಂಘಟನೆಗೆ ಮಾಡಿ ಜನರ ಧ್ವನಿಯಾಗಿ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜಾರಿ ವಿಚಾರದ ಕುರಿತು ನಾನು ಚುನಾವಣೆ ಸಂದರ್ಭದಲ್ಲೇ ಹೇಳಿದ್ದೇನೆ. ಗ್ಯಾರಂಟಿ ಕಾರ್ಡ್ ಜಾರಿಯಿಂದಾಗಿ ರಾಜ್ಯವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ದಿವಾಳಿಯಾಗುತ್ತದೆ. ನೋಡೋಣ ಅವರು ಮೊದಲು ಸರ್ಕಾರ ಮಾಡಲಿ, ನಂತರ ಗ್ಯಾರಂಟಿ ಜಾರಿ ವಿಚಾರವನ್ನು ನಮಗಿಂತ ಜನರೇ ಆ ಬಗ್ಗೆ ತೀರ್ಮಾನ ಮಾಡುತ್ತಾರೆ. ಜನರು ಆ ಗ್ಯಾರಂಟಿಗಳನ್ನು ನೋಡಿ ಅಧಿಕಾರ ಕೊಟ್ಟಿದ್ದಾರೆ. ಆ ನಂಬಿಕೆಯನ್ನು ಕಾಂಗ್ರೆಸ್ನವರು ಎಷ್ಟರಮಟ್ಟಿಗೆ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಳಿಕ ತೀರ್ಮಾನ ಮಾಡುತ್ತಾರೆ ಎಂದು ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಮುಖ್ಯಮಂತ್ರಿ ಆಯ್ಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಸಹಜವಾಗಿ ಸಿಎಂ ಸ್ಥಾನ ಇದ್ದಾಗ ಈ ರೀತಿ ಆಗುತ್ತದೆ. ಅದು ಆ ಪಕ್ಷದ ಆಂತರಿಕ ವಿಚಾರ, ನಾನು ಏನೂ ಹೇಳಲು ಬಯಸುವುದಿಲ್ಲ. ನಮ್ಮ ಪಕ್ಷದಲ್ಲಿ ಬುದ್ದಿವಂತರು, ಯುವಕರು ಇದ್ದಾರೆ. ಎಲ್ಲರೂ ಸೇರಿ ಪಕ್ಷ ಕಟ್ಟುತ್ತೇವೆ ಎಂದರು.
ಸಿ.ಟಿ ರವಿ ಹೇಳಿಕೆ: ಇದೇ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸ್ವಲ್ಪ ಕಾದು ನೋಡಿ. ಗೋಹತ್ಯೆ, ಲವ್ ಜಿಹಾದ್ಗೆ ಪ್ರಚೋದನೆ ಕೊಡುವುದು, ಮತೀಯವಾದಿ, ಅರಾಜಕತೆ, ಪಿಎಫ್ಐ ಅಂತಹ ಶಕ್ತಿಗಳು ಬಲಗೊಳ್ಳಲಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಂತಹ ಶಕ್ತಿಗಳಿಗೆ ನೀರು ಗೊಬ್ಬರ ಹಾಕಿದಂತೆ ಆಗಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿಯಂತಹ ನೂರಾರು ಪ್ರಕರಣಗಳು ಬೆಳೆಯಬಹುದು. ಪಿಎಫ್ಐನಂತಹ ಮತಿಯವಾದಿ ಶಕ್ತಿಗಳನ್ನು ಬೆಳೆಸಿದರೆ ನಿಮಗೆ ತಾತ್ಕಾಲಿಕ ನೆಮ್ಮದಿ ಸಿಗಬಹುದಷ್ಟೆ. ಆದರೆ, ಕಾನೂನು ಸುವ್ಯವಸ್ಥೆ ಕೈ ತಪ್ಪಬಹುದು. ಅದು ಕೂಡ ಕಾಂಗ್ರೆಸ್ಗೆ ಮುಂದೊಂದು ದಿನ ಮುಳುವಾಗಬಹುದು ಎಂದರು.
ಸಂಘ ಪರಿವಾರದ ನಾಯಕರು - ಬೊಮ್ಮಾಯಿ ಭೇಟಿ: ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಸಂಘ ಪರಿವಾರದ ನಾಯಕರ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ, ಪಕ್ಷ ಎಲ್ಲಿ ಎಡವಿತು ಎಂಬ ವಿಚಾರದ ಕುರಿತು ಚರ್ಚಿಸಿದರು. ಭವಿಷ್ಯದ ಸಂಘಟನಾತ್ಮಕ ಚಟುವಟಿಕೆ ಕುರಿತು ಮಾರ್ಗದರ್ಶನ ಪಡೆದುಕೊಂಡರು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.
ಚಾಮರಾಜನಗರದಲ್ಲಿರುವ ಆರ್ಎಸ್ಎಸ್ ಕಚೇರಿ ಕೇಶವ ಕೃಪಕ್ಕೆ ಬೊಮ್ಮಾಯಿ ಭೇಟಿ ನೀಡಿದ್ದರು. ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಬೊಮ್ಮಾಯಿಗೆ ಸಾಥ್ ನೀಡಿದರು. ಸಂಘ ಪರಿವಾರದ ಹಿರಿಯ ನಾಯಕರನ್ನು ಭೇಟಿಯಾದ ಹಂಗಾಮಿ ಸಿಎಂ ಸೋಲಿನ ಕುರಿತು ಚರ್ಚೆ ನಡೆಸಿದರು. ಅಧಿಕಾರ ಕೈ ತಪ್ಪಲು ಕಾರಣವೇನು ಎನ್ನುವ ಕುರಿತು ಸಮಾಲೋಚನೆ ನಡೆಸಿದರು. ಪ್ರತಿಪಕ್ಷವಾಗಿ ಯಾವ ರೀತಿ ಕೆಲಸ ಮಾಡಬೇಕು ಎನ್ನುವ ಕುರಿತು ಮಾರ್ಗದರ್ಶನ ಪಡೆದುಕೊಂಡರು ಎಂದು ತಿಳಿದು ಬಂದಿದೆ.
ಸಭೆ ಬಳಿಕ ಮಾತನಾಡಿದ ಬೊಮ್ಮಾಯಿ, ಸಭೆ ವೇಳೆ ಈ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಪುನರ್ ಸಂಘಟನೆ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಹಲವು ಸಲ ನಮ್ಮ ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರ ಜತೆ ಸಂಘದ ನಾಯಕರು ಚರ್ಚೆ ಮಾಡಿ ಪಕ್ಷ ಸಂಘಟನೆ ಬಗ್ಗೆ ನಿರ್ಧರಿಸುತ್ತಾರೆ. ಶಾಸಕಾಂಗ ಪಕ್ಷದ ಸಭೆ ಬಗ್ಗೆ ಇವತ್ತು ಘೋಷಣೆಯಾಗಲಿದೆ. ಸದ್ಯ ಯಾವುದೇ ನಿರ್ಧಾರ ಆಗಿಲ್ಲ. ನಮ್ಮ ರಾಜ್ಯಾಧ್ಯಕ್ಷರು ಇವತ್ತು ಸಭೆ ಬಗ್ಗೆ ಘೋಷಣೆ ಮಾಡುತ್ತಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕ ಯಾರು ಎನ್ನುವ ಚರ್ಚೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ : ಕಜಕಿಸ್ತಾನದಿಂದ ನನಗೆ ಮಧ್ಯರಾತ್ರಿ ಬೆದರಿಕೆ ಬಂದಿದೆ: ಕೆ ಎಸ್ ಈಶ್ವರಪ್ಪ