ಬೆಂಗಳೂರು: ಈಗಾಗಲೇ ಎಲ್ಲ ಆಸ್ಪತ್ರೆಗಳಲ್ಲಿ ಬೆಡ್ ಫುಲ್ ಆಗಿವೆ. ಕೋವಿಡ್ ಮತ್ತು ನಾನ್ ಕೋವಿಡ್ ಪೇಷೆಂಟ್ ಈಗಾಗಲೇ ಇದ್ದಾರೆ. ಅವರನ್ನು ಏಕಾಏಕಿ ಹೊರಗೆ ಹಾಕಲು ಸಾಧ್ಯವಿಲ್ಲ. ಬೆಡ್ ಖಾಲಿ ಆದ ಕೂಡಲೇ ನಾವು ಸರ್ಕಾರಕ್ಕೆ ಬೆಡ್ ಕೊಡ್ತೀವಿ ಎಂದು ಫನಾ ಅಧ್ಯಕ್ಷ ಡಾ.ಪ್ರಸನ್ನ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಬೆಡ್ ವಿಚಾರವಾಗಿ ಚರ್ಚೆ ಆಗಿದೆ. ಯಾರೂ ಕೂಡಾ ಬೆಡ್ ಕೊಡೊಲ್ಲ ಅಂತ ಹೇಳಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ತುಂಬಿ ಹೋಗಿದೆ. ಹೀಗಾಗಿ ಬೆಡ್ ಸಿಗುತ್ತಿಲ್ಲ. ಬೆಡ್ ಖಾಲಿ ಆದ ಕೂಡಲೇ ನಾವು ಬೆಡ್ ಕೊಡ್ತೀವಿ ಎಂದು ಸ್ಪಷ್ಟಪಡಿಸಿದರು.
ನಾವು ಮೊದಲೇ ಹಾಸಿಗೆ ಕೊಡೋಕೆ ಹೇಗೆ ಸಾಧ್ಯ?. ರೋಗ ಲಕ್ಷಣ ಇಲ್ಲದವರನ್ನು ಸೇರಿಸಿಕೊಳ್ತಿಲ್ಲ. ನಾವೇ ಕೈಮುಗಿದು ಅವರನ್ನು ಕಳಿಸ್ತೇವೆ. ಅವರು ಮನೆಯಲ್ಲೇ ಚಿಕಿತ್ಸೆ ಪಡೆಯಬಹದು. ಗಂಭೀರ ಸ್ಥಿತಿಯಲ್ಲಿರುವರನ್ನೇ ಅಡ್ಮಿಟ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸಣ್ಣ ಮತ್ತು ಮಧ್ಯಮ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇತ್ತು. ಆಕ್ಸಿಜನ್ ಪೂರೈಕೆ ಮಾಡೋರು ನಮಗೆ ಸರಿಯಾಗಿ ಸಪ್ಲೈ ಮಾಡಿರಲಿಲ್ಲ. ಹೀಗಾಗಿ ಸಚಿವರು ಮತ್ತು ಸರ್ಕಾರದ ಅಧಿಕಾರಿಗೆ ಪತ್ರ ಬರೆದಿದ್ದೆ. ಕೂಡಲೇ ಸಚಿವರು ಡ್ರಗ್ ಕಂಟ್ರೋಲ್ಗೆ ಸೂಚನೆ ನೀಡಿ ಆಕ್ಸಿಜನ್ ವ್ಯವಸ್ಥೆ ಮಾಡಿದ್ದಾರೆ. ಕೊರೊನಾದಿಂದ ಆಕ್ಸಿಜನ್ ಬಳಕೆ ಪ್ರಮಾಣ ಹೆಚ್ಚಾಗಿದೆ. ಕೂಡಲೇ ಹೆಚ್ಚು ಆಕ್ಸಿಜನ್ ನೀಡಲು ಮನವಿ ಮಾಡಿದ್ದೇವೆ. ಸಚಿವರು ಕೂಡ ಆಕ್ಸಿಜನ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಸರ್ಕಾರ ಇನ್ನೂ ಖಾಸಗಿ ಆಸ್ಪತ್ರೆಗಳಿಗೆ ಬಾಕಿ ಹಣ ಕೊಟ್ಟಿಲ್ಲ. ಕೊರೊನಾ ಮೊದಲ ಅಲೆ ಚಿಕಿತ್ಸೆ ಹಣ ಬಿಡುಗಡೆ ಮಾಡಿಲ್ಲ. ಒಟ್ಟಾರೆ, ಕರ್ನಾಟಕದಲ್ಲಿ ಶೇ 60ರಷ್ಟು ಹಣ ಮಾತ್ರ ಸರ್ಕಾರ ಈವರಗೆ ಬಿಡುಗಡೆ ಮಾಡಿದೆ. ಬೆಂಗಳೂರಲ್ಲಿ ಶೇ 70ರಷ್ಟು ಹಣ ಮಾತ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಿದೆ. ಒಟ್ಟಾರೆ ಸರ್ಕಾರದಿಂದ ಇನ್ನು 160 ಕೋಟಿ ಬಾಕಿ ಬರಬೇಕು ಎಂದು ಇದೇ ವೇಳೆ ತಿಳಿಸಿದರು.