ಬೆಂಗಳೂರು: ಇಂದು ಪ್ರತಿಭಟನೆ ಮುಕ್ತಾವಾಗಿದೆ. ನಾಳೆಯೂ ಅಧಿವೇಶನ ಮುಂದುವರೆಯಲಿದೆ. ಹಾಗಾಗಿ ನಾಳೆ ಬೆಳಗ್ಗೆ ಮತ್ತೊಂದು ಚಳವಳಿಯ ಮೂಲಕ ಸಿಟಿ ರೈಲ್ವೆ ನಿಲ್ದಾಣದಲ್ಲಿ ಸಮಾವೇಶಗೊಳ್ಳಲಿದ್ದೇವೆ ಎಂದು ರೈತಪರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಪ್ರತಿಭಟನೆ ಮುಕ್ತಾಯವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಕೆಎಸ್ಆರ್ಟಿಸಿ ಹಾಗೂ ಬಿಎಮ್ಟಿಸಿ ನೌಕರರ ಜೊತೆ ಪ್ರತಿಭಟನೆ ಇದೆ. ಮತ್ತೊಂದು ಚಳವಳಿಯ ಮೂಲಕ ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಟಿ ರೈಲ್ವೆ ನಿಲ್ದಾಣದಲ್ಲಿ ಸಮಾವೇಶಗೊಳ್ಳಲಿದ್ದೇವೆ. ನಂತರ ಪಾದಯಾತ್ರೆ ಮೂಲಕ ವಿಧಾನಸೌಧದ ಕಡೆಗೆ ಹೋಗಲಿದ್ದೇವೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಅವರು ಹೇಗೆ, ಎಷ್ಟು ಅನಾಹುತ ಸೃಷ್ಟಿ ಮಾಡಿದಾರಂತೆ ಎಲ್ಲಾ ಮಣ್ಣಿನ ಮಕ್ಕಳಿಗೆ ಅರ್ಥ ಆಗಿದೆ. ಅವರ ದಾರಿ, ಡೀಲ್ಗಳೇ ಬೇರೆ. ಅವರು ರಾಜಕಾರಣಿ, ನಾವು ಹೋರಾಟಗಾರರು ಎಂದರು ತಿರುಗೇಟು ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಸಚಿವ ಸುರೇಶ್ ಕುಮಾರ್ ಆಗಮನ:
![suresh kumar](https://etvbharatimages.akamaized.net/etvbharat/prod-images/9820754_thumb.jpg)
ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಚಿವ ಸುರೇಶ್ ಕುಮಾರ್ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು. ಈ ವೇಳೆ ಚಂದ್ರಶೇಖರ್, ರೈತರಿಗೆ ಏನೂ ಒಳ್ಳೆಯದು ಮಾಡದಿದ್ರೂ ಕೆಟ್ಟದ್ದನ್ನು ಮಾಡಬೇಡಿ. ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾಯ್ದೆ ರದ್ದು ಮಾಡಿ, ನಮ್ಮನ್ನು ಬದುಕೋದಕ್ಕೆ ಬಿಡಿ ಎಂದು ಮನವಿ ಮಾಡಿದರು.
ರೈತರು ಸತ್ಯಾಗ್ರಹ ಮಾಡುವುದು ಇಷ್ಟ ಇಲ್ಲ:
ರೈತರಿಂದ ಮನವಿ ಸ್ವಿಕರಿಸಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ರೈತರು ಸತ್ಯಾಗ್ರಹ ಮಾಡುತ್ತಿರುವುದು ಯಾರಿಗೂ ಇಷ್ಟ ಆಗುವ ವಿಷಯ ಅಲ್ಲ. ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾತುಕತೆಗಳು ನಡೆಯುತ್ತಿವೆ. ಎಪಿಎಂಸಿ ಕಾಯ್ದೆ ಸರ್ಕಾರ ಮಾಡಿರುವ ಉದ್ದೇಶವೇ ಬೇರೆ. ಇದರಿದಂದ ರೈತರು ತಮ್ಮ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಸಿಗಲಿದೆ. ಮುಖ್ಯಮಂತ್ರಿ ಸಮ್ಮುಖದಲ್ಲಿ ಒಂದು ಸಭೆಗೆ ಅವಕಾಶ ಮಾಡಲಾಗುವುದು ಎಂದರು.
ಇದನ್ನೂ ಓದಿ : ಹೆಚ್ಡಿಕೆ ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ: ಕೋಡಿಹಳ್ಳಿ ವಾಗ್ದಾಳಿ
ಟೊಯೋಟಾ ಸಂಸ್ಥೆ ಸಮಸ್ಯೆ ಬಗ್ಗೆ ಡಿಸಿಎಂ, ಕಾರ್ಮಿಕ ಸಚಿವರು ಹಾಗೂ ಸ್ವತಃ ಸಿಎಂ ಸಭೆ ಮಾಡಿದ್ದಾರೆ. ಕಾರ್ಮಿಕರಿಗೆ ಶೋಷಣೆಯಾಗುವುದು ಯಾರಿಗೂ ಇಷ್ಟವಿಲ್ಲ. ಡಿಸಿಎಂ ಹಾಗೂ ಕಾರ್ಮಿಕ ಸಚಿವರನ್ನು ಕರೆಸಿ ಮತ್ತೊಂದು ಸಭೆ ಮಾಡಲಾಗುತ್ತದೆ. ಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಸಿದ್ಧವಾಗಿದೆ. ನಾಗಮಂಗಲದ ರೈತರ ಸಮಸ್ಯೆ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಜೊತೆ ಮಾತನಾಡಲಾಗುವುದು. ಸಿಎಂ ಜೊತೆ ಚರ್ಚಿಸಿ, ಸಾಧ್ಯವಾದಷ್ಟು ಬೇಗ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.