ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆಯೂ ಗಮನ ಕೊಡಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಿಎಂ ಜೊತೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ ಸಾವಿರ ಗಡಿ ದಾಟಿದ್ದು, ರಾಜ್ಯದಲ್ಲಿ ನಿನ್ನೆ ಏಳು ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋವಿಡ್ ಬಗ್ಗೆ ಜನಸಾಮಾನ್ಯರ ನಡವಳಿಕೆ ಬದಲಾಗಬೇಕು. ಕೋವಿಡ್ ನಿಯಮಾನುಸಾರ ನಡೆದುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಸೋಂಕು ಬಂದಾಗ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಲಸಿಕೆ ಕೊಡಬಹುದು. ಆದರೆ ಜನರು ಸರಿಯಾದ ಕ್ರಮ ಅನುಸರಿಸದಿದ್ದರೆ ಮುಂದೆ ಕೊರೊನಾ ಹೆಚ್ಚಾಗಿ ಕಾಡಲಿದ್ದು, ಸರ್ಕಾರದಿಂದ ನಿಯಂತ್ರಣ ಸಾಧ್ಯವಿಲ್ಲ. ನೀವೇ ಕೋವಿಡ್ ನಿಯಮ ಅನುಸರಿಸಬೇಕು ಎಂದರು.
ಎರಡನೇ ಅಲೆ ನಿಯಂತ್ರಣ ಮಾಡಬೇಕಿದ್ದು, ಯುವಕರ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ರೆ ಸಮಸ್ಯೆ ಎದುರಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ತಜ್ಞರ ವರದಿಗೆ ಸಹಕರಿಸದಿದ್ರೆ ಮುಂದೆ ಕಷ್ಟವಾಗಲಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪಾರ್ಟಿ, ಜಾತ್ರೆ ಎಂದು ರಿಯಾಯಿತಿ ನೀಡಲ್ಲ. ಈ ವೇಳೆ ಯಾವ ಕಾರ್ಯಕ್ರಮ ಮಾಡಬೇಕು ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರ ರಕ್ಷಣೆ ಮಾಡಬೇಕು ಎಂದು ಸಚಿವರು ಹೇಳಿದರು.
ಓದಿ: ಕೊರೊನಾ ಎರಡನೇ ಅಲೆ ಆರ್ಭಟ.. ಆಗುತ್ತಾ ನೈಟ್ ಕರ್ಫ್ಯೂ? ಸಮಿತಿ ಶಿಫಾರಸು ಏನು?
ಸರ್ವಪಕ್ಷ ಸಭೆಗೆ ಮನವಿ:
ಈ ಹಿಂದೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದ ಕಾಂಗ್ರೆಸ್ ನಾಯಕರು, ಕೊರೊನಾ ವಿಚಾರದಲ್ಲಿ ಪ್ರತಿಪಕ್ಷಗಳನ್ನು ಕಡೆಗಣಿಸಲಾಗುತ್ತಿದೆ. ಏಕಪಕ್ಷೀಯವಾಗಿ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಆರೋಪ ಮಾಡಿದ್ದರು. ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಫೇಲ್ ಆಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಈ ಬಗ್ಗೆ ಮಾತನಾಡಿದ ಅವರು, ಸರ್ವಪಕ್ಷಗಳ ಸಭೆ ಕರೆಯಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ. ನಂಬರ್ ಜಾಸ್ತಿ ಬಂದಾಗ ಸರ್ಕಾರ ಫೇಲ್ ಎಂದು ಪ್ರತಿಪಕ್ಷ ಆರೋಪ ಮಾಡಲಿದೆ. ಹಾಗಾಗಿ ಎಲ್ಲವನ್ನೂ ನೋಡಿ ಎಚ್ಚರಿಕೆ ವಹಿಸಬೇಕಿದೆ ಎಂದರು.
ಗಡಿಭಾಗದಲ್ಲಿ ಭದ್ರತೆ ವಿಚಾರ:
ಎಲ್ಲಾ ಗಡಿ ಭಾಗದಲ್ಲಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯದಿಂದ ಬರುವವರ ಪ್ರಮಾಣಪತ್ರವನ್ನು ನೋಡಿ ಬಿಡಲು ಆದೇಶಿಸಲಾಗಿದೆ. ಬೇರೆ ರಾಜ್ಯದಿಂದ ಬರುವವರು ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಅನುಮತಿ ನೀಡಲಾಗುತ್ತದೆ. ಒಂದು ಬಾರಿ ಸೋಂಕು ಹೆಚ್ಚಾದರೆ 45 ದಿನದಿಂದ 90 ದಿನದವರೆಗೂ ಸೋಂಕು ಏರಲಿದೆ. ಮಕ್ಕಳ ಯೋಗಕ್ಷೇಮವೂ ಮುಖ್ಯ, ಹೀಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.