ಬೆಂಗಳೂರು: ನಿವೃತ್ತಿ ನಂತರವೂ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆಯನ್ನು ವಿಸ್ತರಿಸುವ ಯೋಜನೆ ರೂಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ನಿವೃತ್ತಿ ನಂತರವೂ ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ನೀಡಬೇಕು ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ವಿಸ್ತರಣೆ ಬಗ್ಗೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಗದು ರಹಿತ ಚಿಕಿತ್ಸೆಯನ್ನು ವಿಸ್ತರಿಸುವ ಯೋಜನೆ ಸರ್ಕಾರ ಪರಿಶೀಲಿಸುತ್ತಿದೆ. ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯವರು ಓಸಿ ಇಲ್ಲದಿರುವ ಆಸ್ತಿ ಗಳಿಂದ ನೀರಿನ ಬಿಲ್ಲಿನ ಜೊತೆ ದಂಡ ವಸೂಲಿ ಮಾಡುತ್ತಿದ್ದಾರೆ. ಬಿಬಿಎಂಪಿ ಮಿತಿಗೆ ಒಳ ಪಡುವುದಕ್ಕೂ ಮುಂಚೆ ಕಟ್ಟಲಾಗಿದ್ದ ಕಟ್ಟಡಗಳಿಗೆ ಓಸಿ ಇರುವುದಿಲ್ಲ. ಆದರೂ ದಂಡ ವಸೂಲಿ ಮಾಡುತ್ತಿರುವುದು ಏಕೆ? ಎನ್ನುವ ಪರಿಷತ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಅವರು ಉತ್ತರಿಸಿ ಬಿಬಿಎಂಪಿಗೆ ಸೇರುವುದಕ್ಕೂ ಮೊದಲು ಕಟ್ಟಿರುವ ಕಟ್ಟಡಗಳಿಗೆ ಓಸಿ ಇಲ್ಲ ಎಂದು ದಂಡ ವಿಧಿಸುತ್ತಿದ್ದರೆ ಅದನ್ನು ಪುನರ್ ಪರಿಶೀಲಿಸಲಾಗುತ್ತದೆ. ಈ ಕುರಿತು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಸರ್ಕಾರದ ದುಂದು ವೆಚ್ಚದ ಬಗ್ಗೆ ಪಕ್ಷಭೇದ ಮರೆತು ಚರ್ಚೆ: ನನಗೆ ಮನೆಯಿಲ್ಲಎಂದ ಜೆಡಿಎಸ್ ಶಾಸಕ
ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ: ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ, ಬಿಡಿಎ ವಾಣಿಜ್ಯ ಕಾಂಪ್ಲೆಕ್ಸ್ ಗಳು ಮುಖ್ಯವಾದ ಆಸ್ತಿಯಾಗಿವೆ. ಇಂದಿರಾನಗರ ಕಾಂಪ್ಲೆಕ್ಸ್ ಅನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಈಗಾಗಲೇ ನಿರ್ಣಯ ಆಗಿದೆ. ಈ ಹಿಂದೆ 3-4 ಬಿಡಿಎ ಕಾಂಪ್ಲೆಕ್ಸ್ ಖಾಸಗಿಗೆ ಕೊಟ್ಟಾಗ ಸಾಕಷ್ಟು ವಿವಾದ ಆಗಿತ್ತು. ಹಾಗಾಗಿ ಈಗ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಇಂದಿರಾನಗರದ ಕೆಲಸ ಪೂರ್ತಿ ಆಗಿಲ್ಲ, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಆದಷ್ಟು ಬೇಗ ಸಿ ಎಸ್ ಕಡೆಯಿಂದ ವರದಿ ಪಡೆದು ಕ್ರಮ ಕೈಗೊಳ್ಳುತ್ತೇವೆ. ಬಿಡಿಎ ಕಾಂಪ್ಲೆಕ್ಸ್ ಅನ್ನು ಇವತ್ತಿನ ಸ್ಥಿತಿಗತಿಗೆ ಅಗತ್ಯವಿದ್ದಂತೆ ಮಾದರಿಯಾಗಿ ನಿರ್ಮಿಸಲಾಗುತ್ತದೆ. ಈಗ ಬಿಡಿಎ ಕಾಂಪ್ಲೆಕ್ಸ್ ಮಳಿಗೆಯಲ್ಲಿ ಇರುವವರಿಗೂ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ನವಿಲೆ ಅಣೆಕಟ್ಟಿಗೆ ಆಡಳಿತಾತ್ಮಕ ಅನುಮೋದನೆ: ತುಂಗಭದ್ರಾ ಅಣೆಕಟ್ಟೆಯಲ್ಲಿ ಹೂಳು ತುಂಬಿರುವ ಕಾರಣ, ನವಿಲೆ ಸಮೀಪ ಸಮತೋಲನ ಅಣೆಕಟ್ಟು ನಿರ್ಮಾಣಕ್ಕೆ 14.30 ಕೋಟಿ ರೂ ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಕಾಂಗ್ರೆಸ್ ಸದಸ್ಯ
ಅಲ್ಲಂ ವೀರಭದ್ರಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು, ನವಿಲೆ ಸಮೀಪ ಸಮತೋಲನ ಅಣೆಕಟ್ಟು ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ.ಈಗಾಗಲೇ 14.30 ಕೋಟಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಖಂಡಿತ ಈ ಯೋಜನೆ ಕೈಗೆತ್ತಿಕೊಳ್ಳುತ್ತೇವೆ. ಈ ಯೋಜನೆ ಬಗ್ಗೆ ತೆಲಂಗಾಣ, ಆಂಧ್ರಪ್ರದೇಶದ ರಾಜ್ಯಗಳೊಂದಿಗೆ ಚರ್ಚೆ ಮಾಡಿ ಯೋಜನೆ ಅನುಷ್ಟಾನಕ್ಕೆ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.