ಬೆಂಗಳೂರು: ಎಲ್ಲ ರಾಜಕೀಯ ಪಕ್ಷಗಳು ರಾಜಕೀಯ ಹಿತಾಸಕ್ತಿಯನ್ನು ಮೀರಿ ರೂಪಾಂತರಗೊಂಡಿರುವ ಕೊರೊನಾ 2ನೇ ಅಲೆಯ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಲೋಕಸಭೆ ಸಚಿವಾಲಯ ದೇಶದ ಎಲ್ಲಾ ಸ್ಪೀಕರ್, ಸಭಾಪತಿ, ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಹಾಗೂ ಪ್ರತಿಪಕ್ಷಗಳ ನಾಯಕರ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಎಲ್ಲ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿದೆ. ಸರ್ಕಾರದ ಜೊತೆ ಸಹಕರಿಸುವ ಅಗತ್ಯವಿದೆ. ಜನ ಎಚ್ಚರಿಕೆಯಿಂದ ಇರುವಂತೆ ಜನಜಾಗೃತಿ ಮೂಡಿಸಬೇಕಾಗಿದೆ. ಸರ್ಕಾರದ ನಿರ್ಧಾರಗಳಿಗೆ ಸಹಕಾರ ನೀಡಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಬೇಕಾದ ಕೆಲಸ ಜನ ಪ್ರತಿನಿಧಿಗಳದ್ದು ಎಂದು ಹೇಳಿದ್ದಾರೆ.
ಎಲ್ಲ ರಾಜಕೀಯ ಪಕ್ಷಗಳು ರಾಜಕೀಯವನ್ನು ಬದಿಗೊತ್ತಿ, ರಾಜಕೀಯ ಹಿತಾಸಕ್ತಿಯನ್ನು ಮೀರಿ ಕೆಲಸ ಮಾಡಬೇಕಾಗುತ್ತದೆ. ಆಗ ಮಾತ್ರ ಈ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಸಾಧ್ಯ ಎಂದಿದ್ದಾರೆ.
ನಾಳೆ ರಾಜ್ಯಪಾಲರ ಜೊತೆ ಸಭೆ : ನಾಳೆ ರಾಜ್ಯಪಾಲ ವಜುಭಾಯ್ ವಾಲಾ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸರ್ವ ಪಕ್ಷಗಳ ಸಭೆ ನಡೆಯಲಿದೆ. ಸಭೆಯಲ್ಲಿ ಉಭಯ ಸದನಗಳ ಸಭಾ ನಾಯಕರು, ಪ್ರತಿಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಕೊರೊನಾ ವಿರುದ್ಧ ಹೋರಾಟ ಮಾಡುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.