ಬೆಂಗಳೂರು : ಈ ಸರ್ಕಾರ ಬಂದ ಮೇಲೆ ಒಂದು ಲಕ್ಷ ಮನೆ ನಿರ್ಮಿಸಲು ತೀರ್ಮಾನಿಸಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಅವರು ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸಿಎಂ ಪರ ಉತ್ತರ ನೀಡಿ, ಬೆಂಗಳೂರು ಸ್ಥಿತಿ ಬಹಳ ಗಂಭೀರವಾಗಿದೆ. ಬೇರೆ ಜಿಲ್ಲೆ ಮಾತ್ರವಲ್ಲ, ರಾಜ್ಯಗಳಿಂದ ವಲಸೆ ಬರುತ್ತಾರೆ. ಕೋವಿಡ್ ಅವಧಿಯಲ್ಲಿ ಹೊರ ಹೋದವರನ್ನು ಗಮನಿಸಿದಾಗ ನಮಗೆ ಇಷ್ಟೊಂದು ಬಂದಿದ್ದಾರಾ ಅನ್ನಿಸಿತು. ಹೊರಗಿನಿಂದ ಬಂದವರಿಗೆಲ್ಲಾ ಮನೆ ಕೊಡಲು ಕಷ್ಟ. ಆದರೆ, ಇಲ್ಲಿ ಕೊಳಗೇರಿಯಲ್ಲಿ ವಾಸವಾಗಿರುವ ಮೂಲ ನಿವಾಸಿಗಳಿಗೆ ಪಟ್ಟಾ ಮಾಡಿಕೊಟ್ಟು ಮನೆ ನಿರ್ಮಿಸಿದ್ದೇವೆ. ನಾವು ಹಣ ನೀಡಿಲ್ಲ ಎನ್ನುವುದು ತಪ್ಪು ಎಂದರು.
ಹಣದ ಕೊರತೆ ನಮ್ಮಲ್ಲಿ ಇಲ್ಲ. ಅನಗತ್ಯ ಅರ್ಜಿ ಸಲ್ಲಿಸಿ, ನಿರ್ಮಾಣ ಸಂದರ್ಭದಲ್ಲಿ ನಿಂತ ಕಾಮಗಾರಿ ಹೆಚ್ಚಿದೆ. 4.90 ಲಕ್ಷ ಮನೆಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಿಸಿಕೊಟ್ಟಿದ್ದೇವೆ. ಮಧ್ಯವರ್ತಿ ಸಂಪರ್ಕ ಇಲ್ಲದೇ ಸರ್ಕಾರ ಮನೆ ಕೊಡುತ್ತಿದೆ. ಎಲ್ಲ ಸಮಾಜ ಹಾಗೂ ಸಮುದಾಯದವರನ್ನೂ ಗುರುತಿಸಿ ವಿಶೇಷ ಪ್ಯಾಕೇಜ್ ನೀಡಲಾಗಿದೆ ಎಂದು ಹೇಳಿದರು.
ಸಚಿವ ಸೋಮಣ್ಣ ಮಾತನಾಡಿ, 65 ಸಾವಿರ ಮಂದಿ ಅಲೆಮಾರಿ ಹಾಗೂ ಗುಡ್ಡಗಾಡು ವಾಸಿ ಸಮುದಾಯದವರನ್ನು ಗುರುತಿಸಿ ಮನೆ ಕಟ್ಟಿಸುತ್ತಿದ್ದು, 39 ಸಾವಿರ ಮನೆ ಕಟ್ಟಿಸಿದ್ದೇವೆ. ಹಿಂದಿನ ಸರ್ಕಾರಗಳು ಮಾಡದ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ 3.49 ಲಕ್ಷ ಮನೆಗಳು ಸುಮಾರು 3 ಸಾವಿರ ಎಕರೆಯಷ್ಟು ಜಾಗದಲ್ಲಿ ಇದ್ದವರಿಗೆ ಜಾಗ ನೋಂದಣಿ ಮಾಡಿಸಿ ಜಾಗ ನೀಡಿ, ಸ್ವಂತ ಮನೆ ಮಾಡಿಕೊಡುತ್ತಿದ್ದೇವೆ. ಬೆಂಗಳೂರು ನಗರ ಹಾಗೂ ಹೊರ ಭಾಗದಲ್ಲಿ 59 ಸಾವಿರ ಮನೆ ಕಟ್ಟಿಸಿಕೊಟ್ಟಿದ್ದೇವೆ. ಸೂರು ಅವಶ್ಯಕತೆ ಇದ್ದವರಿಗೆ ನೀಡಿದ್ದೇವೆ ಎಂದು ಹೇಳಿದರು.
ಒಳಚರಂಡಿ ದುರಸ್ತಿಗೆ ಸಾಕಷ್ಟು ಹಣ: ಸಚಿವ ಮಾಧುಸ್ವಾಮಿ ಮಾತನಾಡಿ, ನಗರಾಭಿವೃದ್ಧಿ ಇಲಾಖೆಗೆ ಸಾಕಷ್ಟು ಅನುದಾನ ನೀಡಿದ್ದೇವೆ. ದಾಖಲೆ ಇದೆ. ಬೆಂಗಳೂರು ನಗರದಲ್ಲಿ 6 ರಿಂದ 9 ಸಾವಿರ ಕೋಟಿ ರೂ. ನೀಡಿದ್ದೇವೆ. ಒಳಚರಂಡಿ ರಿಪೇರಿಗೆ ಸಾಕಷ್ಟು ಹಣ ನೀಡಿದ್ದೇವೆ. ಸಂಸ್ಕರಣೆ ಮಾಡಿದ ನೀರನ್ನು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೆ. ಸಿ ವ್ಯಾಲಿ ಮೂಲಕ ಕಳುಹಿಸುತ್ತಿದ್ದೇವೆ. ಈಗ 900 ಕೋಟಿ ರೂ. ನಲ್ಲಿ ವೃಷಭಾವತಿ ನೀರನ್ನೂ ಸುತ್ತಲಿನ ಜಿಲ್ಲೆಯ ಕೆರೆಗೆ ಸಂಸ್ಕರಿಸಿ ತುಂಬುತ್ತೇವೆ. ನಗರದ ಕೆರೆಗೂ ತುಂಬಿಸುತ್ತೇವೆ. ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್ ತುಂಬಿಸುತ್ತಿದ್ದೇವೆ ಎಂದರು.
ಆರೋಗ್ಯಕ್ಕೂ ಹೆಚ್ಚಿನ ಒತ್ತು: ಆರೋಗ್ಯ ಸೇವೆ ಹೆಚ್ಚಿಸಿದ್ದೇವೆ. ಮೂಲಸೌಕರ್ಯ, ಹೂಡಿಕೆ ಹೆಚ್ಚಾದಾಗ ಬಂಡವಾಳ ನಿರೀಕ್ಷೆ ಸಹಜ. ಕೇಂದ್ರ ಸರ್ಕಾರದ ಸಹಕಾರ ಇಲ್ಲದೇ ಅಭಿವೃದ್ಧಿ ಆಗಲ್ಲ. ಡಬಲ್ ಎಂಜಿನ್ ಸರ್ಕಾರ ಸಾಕಷ್ಟು ಸಾಧನೆ ಮಾಡಿದೆ. ಅನಗತ್ಯ ಆರೋಪ ಬೇಡ. ನಾನು ಕೆಎಂಎಫ್ ನೇತೃತ್ವ ವಹಿಸಿದ್ದೆ. ಆಗಲೂ ಬ್ರ್ಯಾಂಡ್ ಕಾಮನ್ ಇದ್ದರೆ ಒಟ್ಟಾಗಿ ಮಾರಬಹುದಾ? ಅನ್ನುವ ಉದ್ದೇಶದಿಂದ ಮಾತನಾಡಿದ್ದರು. ಆದರೆ, ಕೆಎಂಎಫ್ ಅನ್ನು ಅಮುಲ್ ಜತೆ ವಿಲೀನ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದರು. ಆದರೆ ಯಾವುದೇ ವಿಲೀನ ಪ್ರಸ್ತಾಪ ಮಾಡಲ್ಲ, ಇಲ್ಲವೇ ಇಲ್ಲ ಎಂದರು.
ರೈತರ ವಿರೋಧ ಇಲ್ಲ: ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಮಾಧುಸ್ವಾಮಿ ಅವರು ಕಾನೂನು ಸಚಿವರಾಗಿದ್ದಾರೆ. ಮುಂದೆ ರೈಲು ಸಚಿವರಾದರೆ ಉತ್ತಮ. ಕೇಂದ್ರದಿಂದ ರಾಜ್ಯಕ್ಕೆ ಕೊಡುಗೆ ಶೂನ್ಯ. 36 ಸಾವಿರ ಕೋಟಿ ನಷ್ಟವಾಗಿದೆ ಅಂತ ನಾವು ಮಾಹಿತಿ ಕೊಟ್ಟರೆ, ಕೇವಲ 6 ಸಾವಿರ ಕೋಟಿ ಕೊಟ್ಟಿದ್ದಾರೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಜನ ಚಕ್ರಕ್ಕೆ ಸಿಕ್ಕು ನಜ್ಜುಗುಜ್ಜಾಗಿದ್ದಾರೆ. ಡಬಲ್ ಎಂಜಿನ್ ಸರ್ಕಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ತಿಳಿಸಿ. ನೀವು ಒಂದು ವಿಮಾನ ನಿಲ್ದಾಣ ಮಾಡಿ ಅದಾನಿಗೆ ಮಾರಾಟ ಮಾಡಿದ್ದೀರಿ. ಕೇಂದ್ರದಲ್ಲಿ ಕೃಷಿ, ಎಪಿಎಂಸಿ ಕಾಯ್ದೆ ವಾಪಸ್ ಪಡೆಯಲಾಗಿದೆ. ಇಲ್ಲೇಕೆ ಆಗಿಲ್ಲ ಎಂದಾಗ ಮಧ್ಯಪ್ರವೇಶ ಮಾಡಿದ ಸಚಿವ ಸೋಮಶೇಖರ್, ಇದಕ್ಕೆ ರೈತರ ವಿರೋಧ ಇಲ್ಲ. ಪ್ರತಿಪಕ್ಷ ಮಾತ್ರ ವಿರೋಧಿಸುವುದು ಏಕೆ ಎಂದು ಪ್ರಶ್ನಿಸಿದರು.
ಆಯುಷ್ಮಾನ್ ಕಾರ್ಡ್ ಆರಂಭ: ಆಕ್ಸಿಜನ್ ವಿಚಾರವಾಗಿ ಸಾಧನೆ ಮಾಡಿಲ್ಲ. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದಾಗ ನೀವು ಹೊರ ಬಂದಿರಿ. ಚಾಮರಾಜನಗರ ಆಮ್ಲಜನಕ ಕೊರತೆಯಿಂದ 34 ಮಂದಿ ಸತ್ತಾಗ ಆರೋಗ್ಯ ಸಚಿವ ಮೂರು ಮಾತ್ರ ಎಂದರು. ನಂತರ ವಿಚಾರಣೆ ಆದಮೇಲೆ ಈಗ ಪರಿಹಾರ ಕೊಟ್ಟಿದ್ದಾರೆ. ಆಯುಷ್ಮಾನ್ ಕಾರ್ಡ್ ಆರಂಭಿಸಿದ್ದಾರೆ. ಸಾಲದಲ್ಲೇ ಮುಂದುವರಿದ ಸರ್ಕಾರ ಇನ್ನಷ್ಟು ಸಾಲ ಮಾಡಲು ಮುಂದಾಗಿದೆ.
ಹರಿಪ್ರಸಾದ್ ಮಾತು ಮುಂದುವರಿಸಿ, ನಿಮ್ಮ ಬೆನ್ನು ನೀವು ತಟ್ಟಿಕೊಳ್ಳುವುದು ಸರಿಯಲ್ಲ. ಮೂಲ ಸೌಕರ್ಯ ಏನೂ ಕಲ್ಪಿಸಿಲ್ಲ. ಬೆಂಗಳೂರಿನಲ್ಲಿ 25 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದಿದೆ. ಗುಂಡಿಗೆ ಹಾಕಿದ್ರಾ ಅನುದಾನವನ್ನು? ಗುತ್ತಿಗೆದಾರರ ಸಂಘದ ಅಧ್ಯಕ್ಷರು ದೂರು ನೀಡಿದ ವರ್ಷದ ನಂತರವೂ ಪ್ರತಿಕ್ರಿಯೆ ಪ್ರಧಾನಿ ಕಡೆಯಿಂದ ಬಂದಿಲ್ಲ. ಈ 40% ಸರ್ಕಾರದಿಂದ ಪ್ರಧಾನಿಗೂ 40% ಹೋಗಿದೆಯಾ ಎಂದು ಕೇಳಿದಾಗ ಗದ್ದಲದ ವಾತಾವರಣ ಏರ್ಪಟ್ಟಿತು. ಉಭಯ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಯತ್ನಾಳ್ ಸದನದ ಆಚೆ ಮಾತನಾಡಿದ್ದಾರೆ, ಅದಕ್ಕೆ ಹೊರಗೆ ಉತ್ತರ ನೀಡುತ್ತಾರೆ ಎಂದು ಮುಖ್ಯಸಚೇತಕ ನಾರಾಯಣಸ್ವಾಮಿ ಹೇಳಿದಾಗ ಸಿಟ್ಟಾದ ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಕಡೆಯಿಂದ ಸಚಿವರಾದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್ ಅವರು ಪ್ರತಿಪಕ್ಷ ವಿರುದ್ಧ ಮುಗಿ ಬಿದ್ದರು. ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಹಾಲಿ, ಮಾಜಿ ಪ್ರಧಾನಿಗಳ ಬಗ್ಗೆ ಲಘುವಾಗಿ ಮಾತನಾಡಬಾರದು. ಮನಮೋಹನ್ ಸಿಂಗ್ ಒಬ್ಬ ಆರ್ಥಿಕ ತಜ್ಞ. ಮೋದಿ ಸಹ ಅತ್ಯಂತ ಹಿಂದುಳಿದ ವರ್ಗದ ನೇತಾರ. ಗೌರವಯುತ ಸ್ಥಾನದಲ್ಲಿರುವವರ ಬಗ್ಗೆ ಹಗುರಾಗಿ ಮಾತನಾಡುವುದು ಬೇಡ. ದಮ್ಮು, ತಾಕತ್ತು ವಿಚಾರ ಬೇಡ. ಗಂಭೀರ ಚರ್ಚೆ ಆಗಲಿ ಎಂದರು.
ಇದನ್ನೂ ಓದಿ : ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದ ಪ್ರತಿಪಕ್ಷಗಳಿಗೆ ಟಕ್ಕರ್ ಕೊಟ್ಟ ಮಾಧುಸ್ವಾಮಿ..!