ಬೆಂಗಳೂರು: ಡಿಸೆಂಬರ್ 8ರಂದು ನಡೆಯುವ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಉತ್ತರ ಭಾರತದ ರೈತರು ಹೋರಾಟ ಮಾಡುತ್ತಿದ್ದಾರೆ. ನಮ್ಮ ದಕ್ಷಿಣ ಭಾರತದ ರೈತರು ಹೋರಾಟ ಮಾಡಿ ಸಾಕಾಗಿದೆ. ಕೇಂದ್ರದ ರೈತ ವಿರೋಧಿ ನೀತಿ ವಿರುದ್ಧ ಧರಣಿ ನಡೆಸುತ್ತಿದ್ದಾರೆ. ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ವಿರೋಧ ಮಾಡಿ ಯಾವ ರಾಜಕಾರಣಿಗಳೂ ಉಳಿದಿಲ್ಲ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದರು.
ರೈತರ ಪರವಾಗಿ ನಾವಿರೋದಾದ್ರೆ ಸದನ ಬಂದ್ ಮಾಡಬೇಕು. ಆಡಳಿತ ಪಕ್ಷದವರು ಏನು ಬೇಕಾದರೂ ಮಾಡಲಿ. ಆದರೆ ಪ್ರತಿಪಕ್ಷದವರು ನಾಳೆ ಕಲಾಪ ಬಹಿಷ್ಕರಿಸಬೇಕು. ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು. ಇದರ ಬಗ್ಗೆ ನಾವು ಗೌಡರ ಜೊತೆ ಚರ್ಚೆ ಮಾಡುತ್ತೇವೆ. ನಂತರ ನಾವು ನಿರ್ಧಾರ ತೆಗೆದುಕೊಳ್ಳುತೇವೆ ಎಂದರು.
ಇದನ್ನೂ ಓದಿ: ರೈತರು ಕರೆ ನೀಡಿರುವ ಬಂದ್ಗೆ ಕಾಂಗ್ರೆಸ್ ಬೆಂಬಲ: ಡಿಕೆಶಿ
ಒಕ್ಕಲಿಗರಿಗೆ ಪ್ರತ್ಯೇಕ ರಾಜ್ಯ ಕುರಿತ ಸೋಮೇಶ್ವರನಾಥ ಸ್ವಾಮೀಜಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಈ ರೀತಿಯ ಹೇಳಿಕೆ ಸರಿಯಲ್ಲ. ಇದು ಬಾಲಿಶ ಹೇಳಿಕೆ. ಜಾತಿವಾರು ರಾಜ್ಯ ಮಾಡಲು ಸಾಧ್ಯವೇ? ಇದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೆ. ಕರ್ನಾಟಕ ರಾಜ್ಯವನ್ನು ಜಾತಿವಾರು ಒಡೆದು ಸಂಘರ್ಷಕ್ಕೆ ಹಾದಿ ಮಾಡಿಕೊಡುತ್ತಿದ್ದಾರೆ. ಯಾರೇ ಈ ರೀತಿಯ ಹೇಳಿಕೆ ಕೊಟ್ರು ಸರಿಯಲ್ಲ. ಸ್ವಾಮೀಜಿಯೇ ಆಗಲಿ, ಯಾರೇ ಆಗಲಿ ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಜನ ವಿರೋಧಿ ಕಾನೂನು ತರ್ತಿದೆ. ಇದರ ವಿರುದ್ಧ ರೈತರು ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಈ ಬಂದ್ಗೆ ನಮ್ಮ ಬೆಂಬಲವಿದೆ ಎಂದರು.