ಬೆಂಗಳೂರು: ಸೋಮವಾರ ಮಂಡನೆಯಾಗಿರುವ ಕೇಂದ್ರ ಬಜೆಟ್ನಲ್ಲಿ ಏನೂ ಇರುವುದಿಲ್ಲ ಎನ್ನುವುದು ನನಗೆ ಮೊದಲೇ ಗೊತ್ತಿತ್ತು ಎಂದು ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಿರ್ಮಲಾ ಸೀತಾರಾಮನ್ ರಂತಹವರು ಯಾವಾಗ ವಿತ್ತ ಸಚಿವರಾಗುತ್ತಾರೋ ಆಗ ನಾವು ಯಾವುದೇ ನಿರೀಕ್ಷೆ ಹೊಂದಲು ಸಾಧ್ಯವಿರುವುದಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಆರ್ಥಿಕ ಮುಗ್ಗಟ್ಟಿನಿಂದ ಆಚೆ ಬರುವುದಕ್ಕೆ ಕಾಂಗ್ರೆಸ್ ಪಕ್ಷದ ಆರ್ಥಿಕ ತಜ್ಞರ ಸಹಕಾರ ಪಡೆಯಿರಿ ಎಂದು ಸಲಹೆ ನೀಡಲಾಗಿತ್ತು. ಆದರೆ ಯಾರ ಸಲಹೆಯನ್ನು ಅವರು ಸ್ವೀಕಾರ ಮಾಡಲಿಲ್ಲ. ಕರ್ನಾಟಕದಿಂದ ಆಯ್ಕೆಯಾದರೂ ರಾಜ್ಯಕ್ಕೆ ಅವರ ಕೊಡುಗೆ ಏನೇನೂ ಇಲ್ಲ. ಮೆಟ್ರೋ ರೈಲು ಯೋಜನೆ ಜಾರಿಯಲ್ಲಿರುವ ಕಾಮಗಾರಿಯಾಗಿರುವ ಕಾರಣ ಹಣ ಕೊಡಲೇ ಬೇಕಿತ್ತು. ಅದಕ್ಕಾಗಿ 14 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ.
ಇಷ್ಟನ್ನು ಹೊರತುಪಡಿಸಿದರೆ ರೈತರಿಗೆ ಆಗಲಿ, ಸಾಮಾನ್ಯ ನಾಗರಿಕರಿಗೆ ಆಗಲಿ ಯಾವುದೇ ಕೊಡುಗೆ ನೀಡಿಲ್ಲ. ಇಂಧನ ಹಾಗೂ ಗ್ಯಾಸ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಇದಕ್ಕೆ ಯಾವುದೇ ಪರಿಹಾರ ಕಲ್ಪಿಸಿಲ್ಲ. ಈ ಹಿನ್ನೆಲೆಯಲ್ಲಿ ಇದು ಸಂಪೂರ್ಣ ನಿರಾಶದಾಯಕ ಬಜೆಟ್ ಆಗಿದೆ. ಇಲ್ಲಿ ಏನಾದರೂ ನಿರೀಕ್ಷೆ ಉಳಿಸಿಕೊಂಡರೆ ಅದು ನಮ್ಮ ತಪ್ಪು ಎಂದು ವಿವರಿಸಿದರು.
ಎಲ್ಲಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಯಾವುದನ್ನೂ ಬಿಡುವುದಿಲ್ಲ. ಬಂಡವಾಳಶಾಹಿಗಳಿಗೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಎಲ್ಲಿಯವರೆಗೆ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಬಂಡವಾಳಶಾಹಿಗಳಿಗೆ ಮಾತ್ರ ಅನುಕೂಲ ಆಗುತ್ತಾ ಇರುತ್ತದೆ ಎಂದು ಭವಿಷ್ಯ ನುಡಿದರು.