ಬೆಂಗಳೂರು: ಹೈಕಮಾಂಡ್ ಏನು ನಿರ್ದೇಶನ ಕೊಡುತ್ತೋ ಅದನ್ನು ಪಾಲನೆ ಮಾಡ್ತೀವಿ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ವಿಧಾನಸೌಧದಲ್ಲಿ ಇಂದು ನಡೆದ ವಲಸಿಗರ ಹಾಗೂ ಸಿಎಂ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಸಭೆ ಬಳಿಕ ಸಿಎಂ ಕಚೇರಿಗೆ ಹೋಗಿ ಬಂದಿದ್ದೇವೆ. ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಅಷ್ಟೇ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ ಎಂದರು.
ಈ ನಡುವೆ ಸುದ್ದಿಗಾರರು ವಲಸಿಗರ ರಾಜೀನಾಮೆ ಬಗ್ಗೆ ಕೇಳಲಾದ ಪ್ರಶ್ನೆಗೆ ಸಚಿವ ಭೈರತಿ ಬಸವರಾಜ್, ರಾಜೀನಾಮೆಯನ್ನು ಏಕೆ ಕೊಡಬೇಕೆಂದು ಕೆಂಡಕಾರಿದರು.
ಅದನ್ನು ಅಲ್ಲಗಳೆದ ಸುಧಾಕರ್, ಸಿಎಂ ಕಚೇರಿಗೆ ತೆರಳಿ ಅವರ ಮುಂದೆ ನಡೆಸಲಾದ ಮಾತುಕತೆ ಬಗ್ಗೆ ಪ್ರಸ್ತಾಪ ಮಾಡಿದರು. ಯಡಿಯೂರಪ್ಪನವರು ಮುಂದೆ ಪಕ್ಷ ಸಂಘಟನೆ ಮಾಡುವುದಾಗಿ ನಮ್ಮ ಮುಂದೆ ಹೇಳಿದ್ದಾರೆ. ನಾವು ಅವರ ಜೊತೆ ಇರುವುದು ನಮ್ಮ ಧರ್ಮ. ಎಲ್ಲಿಯವರೆಗೂ ಅವರು ಇರ್ತಾರೋ ನಾವು ಅಲ್ಲಿಯವರೆಗೂ ಇರ್ತೀವಿ. ನಮಗೆ ಯಾವ ಆತಂಕವೂ ಇಲ್ಲ. ಅಗತ್ಯಬಿದ್ದರೆ ದೆಹಲಿಗೂ ಹೋಗಿ ಬರ್ತೀವಿ ಎಂದರು.
ವಲಸೆ ಸಚಿವರ-ಸಿಎಂ ಪ್ರತ್ಯೇಕ ಚರ್ಚೆ ಗೊಂದಲಕ್ಕೆ ತೆರೆ:
ಕ್ಯಾಬಿನೆಟ್ ಸಭೆ ಮುಕ್ತಾಯದ ಬೆನ್ನಲ್ಲೇ ವಲಸೆ ಶಾಸಕರು ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಧಾನಸೌಧದ ಸಿಎಂ ಕೊಠಡಿಯಲ್ಲಿ ನಡೆದ ಪ್ರತ್ಯೇಕ ಸಭೆ ಗೊಂದಲಕ್ಕೆ ಎಂಟಿಬಿ ನಾಗರಾಜ್ ಸೇರಿದಂತೆ ವಲಸಿಗ ಸಚಿವರು ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಸಿಎಂ ರೇಸ್ನಲ್ಲಿ ಸಿ.ಟಿ. ರವಿ, ಅರವಿಂದ ಬೆಲ್ಲದ್: ಯಾರಿಗೆ ಮಣೆ ಹಾಕಲಿದೆ ಹೈಕಮಾಂಡ್?
ಯಾವುದೇ ರಾಜೀನಾಮೆ ನೀಡಲು ಹೋಗಿಲ್ಲ. ಸಿಎಂ ಬಳಿ ವರ್ಗಾವಣೆ, ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಹೈಕಮಾಂಡ್ ಕೇಳಿದರೆ ನಾವೂ ರಾಜೀನಾಮೆ ಕೊಡುತ್ತೇವೆ. ಹೈಕಮಾಂಡ್ಗಿಂತ ನಾವು ದೊಡ್ಡವರಲ್ಲ ಎಂದರು.
ಕಾರ್ಮಿಕ ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್ ಕೂಡ ಪತ್ರಗಳನ್ನ ತೋರಿಸಿ ನಾನು ಇಲಾಖೆಯ ಕೆಲಸಕ್ಕೆ ಹೋಗಿದ್ದು ಎಂದು ಸ್ಪಷ್ಟನೆ ನೀಡಿದರು.