ಬೆಂಗಳೂರು : ತಮ್ಮ ಕ್ಷೇತ್ರದ ಜನರಿಗೆ ನೀರಿನ ಸಮಸ್ಯೆ ಆಗಬಾರದು ಎಂದು ಸಚಿವ ಬೈರತಿ ಬಸವರಾಜ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜು ಅವರು, ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಲವು ಬಡಾವಣೆಗಳಲ್ಲಿ ಸಮರ್ಪಕ ರೀತಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಸರಿಪಡಿಸುವ ಕುರಿತು ಇಂದು ಬೆಳಗ್ಗೆ ಬೆಂಗಳೂರು ಜಲಮಂಡಲಿ ಅಧಿಕಾರಿಗಳ ಸಭೆಯನ್ನು ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಡೆಸಿದರು.
ಕ್ಷೇತ್ರದಲ್ಲಿ ಹಲವಾರು ಕಡೆ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಇದನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ವಿಳಂಬ ಆಗಬಾರದು. ಅಧಿಕಾರಿಗಳು ತ್ವರಿತವಾಗಿ ಕೆಲಸ ಆಗುವ ರೀತಿ ನೋಡಿಕೊಂಡು ಸಾರ್ವಜನಿಕರಿಗೆ ಅನೂಕೂಲಕರ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.
ಕೆಆರ್‌ಪುರ ಕ್ಷೇತ್ರದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಆದಷ್ಟು ಬೇಗ ನಿವಾರಣೆ ಮಾಡಿ ನನ್ನ ಗಮನಕ್ಕೆ ತನ್ನಿ ಎಂದಿರುವ ಅವರು, ಯಾವುದೇ ದೂರುಗಳು ಬರಬಾರದು ಎಂದು ಎಚ್ಚರಿಸಿದ್ದಾರೆ.
ಹೊರಮಾವು ವಾರ್ಡ್ನ ಕ್ಯಾಲಸನಹಳ್ಳಿಯ ಪೂರ್ವಾಂಕರ್ ಅಪಾರ್ಟ್ಮೆಂಟ್ ಭಾಗಕ್ಕೆ ಕಾವೇರಿ ನೀರು ತರಲು ಹೆಚ್ ಆರ್ ಬಿಆರ್ ಬಡಾವಣೆಯಿಂದ ಸಂಪರ್ಕ ತೆಗೆದುಕೊಂಡು ನೀರು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ಬೆಂಗಳೂರು ಜಲಮಂಡಲಿ ಅಧ್ಯಕ್ಷರಾದ ಎನ್. ಜಯರಾಂ, ಮುಖ್ಯ ಅಭಿಯಂತರರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.