ಬೆಂಗಳೂರು: ಬಿಜೆಪಿಯವರು ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪ ಮಾಡಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿಯ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಸಾರ್ವಜನಿಕವಾಗಿ ಪ್ರತಿ ಮತದಾರರಿಗೆ 6 ಸಾವಿರ ಕೊಡ್ತೇವೆ ಎಂದು ಹೇಳಿದ್ದಾರೆ.
ಹಣ ಕೊಟ್ಟು ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದ ಅವರು, ಯಾರು ಎಷ್ಟು ಖರ್ಚು ಮಾಡ್ತಾರೋ, ಅದರ ಎರಡು ಪಟ್ಟು ಖರ್ಚು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಸಿಎಂ, ನಡ್ಡಾ, ಕಟೀಲ್ ಅವರ ಸಹಮತವಿದೆ. ಇದರ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು. ಪೊಲೀಸ್ ನವರು ಸಹ ಇದರ ಬಗ್ಗೆ ಗಮನ ಹರಿಸಬೇಕು, ಫ್ರಿ ಅಂಡ್ ಫೇರ್ ಎಲೆಕ್ಷನ್ ಆಗಬೇಕು ಎಂದರು. ಕರ್ನಾಟಕದಲ್ಲಿ ಸುಮಾರು ಐದು ಕೋಟಿ ಮತದಾರರು ಇದ್ದಾರೆ. ಒಟ್ಟು ಮೂವತ್ತು ಸಾವಿರ ಕೋಟಿ ಖರ್ಚು ಮಾಡಲು ಸಿದ್ದವಾಗಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಅವರು ಹಣ ಸಂಗ್ರಹಿಸಿ ಇಟ್ಟಿದ್ದಾರೆ ಎಂದು ಆರೋಪಿಸಿದರು.
ಪೊಲೀಸರ ಮೇಲೆ ಸಿಎಂ ಹಾಗೂ ಬಿಜೆಪಿ ನಾಯಕರು ಪ್ರಭಾವ ಉಗ್ರಪ್ಪ ಆರೋಪ: ಮೊನ್ನೆ ಡಿಕೆಶಿ, ಸಿದ್ದರಾಮಯ್ಯ, ನಾನು ಸೇರಿ ದೂರು ಕೊಟ್ಟಿದ್ದೇವೆ. ಆದರೆ, ಈವರೆಗೂ ಎಫ್ಐಆರ್ ಆಗಿಲ್ಲ. ಪೊಲೀಸರ ಮೇಲೆ ಸಿಎಂ ಹಾಗೂ ಬಿಜೆಪಿ ನಾಯಕರು ಪ್ರಭಾವ ಬೀರಿದ್ದಾರೆ ಎಂದು ಕಾಣುತ್ತದೆ. ದೂರು ದಾಖಲಾದ ತಕ್ಷಣ ತನಿಖೆ ಆಗಬೇಕು ಎಂದು ಸುಪ್ರೀಂಕೋರ್ಟ್ ಜಡ್ಜ್ ನಿರ್ದೇಶನಗಳಿವೆ. ಆದರೂ ಎಫ್ಐಆರ್ ದಾಖಲಾಗಿಲ್ಲ. ವಿಪಕ್ಷದವರು ದಾಖಲೆ ಸಮೇತ ದೂರು ಕೊಟ್ಟಿದ್ದಾರೆ. ಆದರೂ ಕೇಸ್ ದಾಖಲು ಆಗದೇ ಇರೋದು ನೋಡಿದರೆ ಪೊಲೀಸರ ಮೇಲೆ ಪ್ರಭಾವ ಬೀರಿದ್ದು ಗೊತ್ತಾಗುತ್ತದೆ. ಕೂಡಲೇ ದೂರಿನ ಮೇಲೆ ಎಫ್ಐಆರ್ ಮಾಡಿ ತನಿಖೆ ಮಾಡಿಸಬೇಕು. ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಒತ್ತಾಯ ಮಾಡುತ್ತೇನೆ ಎಂದರು.
ಕಾಂಗ್ರೆಸ್ ನಾಯಕರಿಂದ ಕುಕ್ಕರ್ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿ, ಚುನಾವಣಾ ಅಕ್ರಮ ಯಾರೇ ಮಾಡಲಿ. ಕೂಡಲೇ ಅದರ ಬಗ್ಗೆ ಕ್ರಮ ಜರುಗಿಸಬೇಕು. ನಮ್ಮ ಪಕ್ಷ ಯಾರಿಗೂ ಇನ್ನ ಟಿಕೆಟ್ ಕೊಟ್ಟಿಲ್ಲ. ನಮ್ಮ ಅಭ್ಯರ್ಥಿಗಳು ಯಾರು ಆಮಿಷ ಒಡ್ಡಿಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧ ನಡೆಯಲ್ಲ, ನಮ್ಮ ಪಕ್ಷದ ನಾಯಕರು ನಡೆದುಕೊಳ್ಳಲ್ಲ. ಬಿಜೆಪಿಯವರು ಕಾನೂನಿಗೆ ಮಾನ್ಯತೆ ನೀಡಲ್ಲ. ಸಿ.ಪಿ.ಯೋಗೇಶ್ವರ್ ಈಗಾಗಲೇ ಹೇಳಿದ್ದಾರೆ. ನಾವು ಚುನಾವಣೆಯಲ್ಲಿ ಗೆಲ್ಲೋಕೆ ಆಗಲ್ಲ ಎಂದಿದ್ದಾರೆ. ಹಾಗಾಗಿ ಇಂತಹ ಅಕ್ರಮ ಪ್ರಯತ್ನ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲೋಕೆ ಹೀಗೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ನಾವು ಸೋಮವಾರ ದೂರು ಕೊಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಅಂಡ್ ಟೀಂ ಚಂಬಲ್ ಕಣಿವೆ ಸಂಸ್ಕೃತಿಯಿಂದ ಬಂದವರು: ಹೆಚ್ಡಿ ಕುಮಾರಸ್ವಾಮಿ
ಹೆಚ್ಡಿಕೆ ವಿರುದ್ಧ ಉಗ್ರಪ್ಪ ವಾಗ್ದಾಳಿ: ಕಾಂಗ್ರೆಸ್ ಘೋಷಣೆ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ದೇವೇಗೌಡರು ಹಿಂದೆ ಯಾವ್ಯಾವ ಆಶ್ವಾಸನೆ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಲಘುವಾಗಿ ಮಾತನಾಡ್ಲಾ? ನಾನು ಆ ರೀತಿ ಲಘುವಾಗಿ ಮಾತನಾಡಲ್ಲ. ಅನೇಕ ಭಾಗ್ಯಗಳನ್ನ ಸಿದ್ದರಾಮಯ್ಯ ಕೊಟ್ಟರು. ಆಗ ಯಾಕೆ ಕುಮಾರಸ್ವಾಮಿ ಮಾತನಾಡಲಿಲ್ಲ. ಗೃಹಿಣಿಯರಿಗೆ 2000 ಕೊಡುವುದು ಬದ್ಧತೆ. 200 ಯೂನಿಟ್ ವಿದ್ಯುತ್ ಕೊಡುವುದು ಬದ್ದತೆಯಿದೆ. ಇದರ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಿಮ್ಮ ಪಾರ್ಟಿ ಅವರನ್ನ ನೀವು ಕಂಟ್ರೋಲ್ ಮಾಡಿಕೊಳ್ಳಿ: ಸಿದ್ದರಾಮಯ್ಯಗೆ ಹೆಚ್ಡಿಕೆ ಟಾಂಗ್