ಬೆಂಗಳೂರು: ವಿಜಯನಗರ ಮತ್ತು ಗೋವಿಂದರಾಜ ನಗರ ಕ್ಷೇತ್ರದ ಅಭ್ಯರ್ಥಿಗಳು ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು ಯಾರೂ ಮತದಾನದಿಂದ ದೂರ ಉಳಿಯಬಾರದು. ಸಮಯವಾಗಲಿ ಎಂದು ಕಾಯದೇ ಎಲ್ಲರೂ ಬಂದು ಮತ ಚಲಾಯಿಸಿ ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದ್ದಾರೆ.
ವಿಜಯನಗರದ ಹೋಲಿ ಏಂಜಲ್ಸ್ ಹೈ ಸ್ಕೂಲ್ ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜ ನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಕುಟುಂಬ ಸಮೇತರಾಗಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಕೃಷ್ಣಪ್ಪ ಮತದಾನ ಮಾಡಿ ಹೊರಗೆ ಬರುತ್ತಿದ್ದಂತೆ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ರವೀಂದ್ರ ಮತಗಟ್ಟೆ ವೀಕ್ಷಿಸಿದರು. ಈ ವೇಳೆ ಮತಗಟ್ಟೆ ಕೇಂದ್ರದ ಬಳಿ ಎದುರು ಬದುರಾದ ಕಾಂಗ್ರೆಸ್ ಎಂ. ಕೃಷ್ಣಪ್ಪ ಹಾಗೂ ಬಿಜೆಪಿಯ ರವೀಂದ್ರ ಗಮನ ಸೆಳೆದರು. ಇದಕ್ಕೂ ಮುನ್ನ ವಿಜಯನಗರ ಬಿಜೆಪಿ ಅಭ್ಯರ್ಥಿ ರವೀಂದ್ರ ಮತದಾನ ಮಾಡಿದ್ದರು. ಮತದಾನದ ನಂತರ ಕ್ಷೇತ್ರದಲ್ಲಿ ಸಂಚರಿಸಿ ಮತಗಟ್ಟೆ ವೀಕ್ಷಣೆ ಮಾಡುತ್ತಿದ್ದಾರೆ.
ಮತದಾನದ ಬಳಿಕ ಮಾತನಾಡಿದ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ "ದಯವಿಟ್ಟು ನಿಮ್ಮ ಹಕ್ಕನ್ನ ಚಲಾಯಿಸುವುದನ್ನ ಮರೆಯಬೇಡಿ. ನಿಮ್ಮ ಹಕ್ಕನ್ನು ಚಲಾಯಿಸಿ. ದಯಮಾಡಿ ಒಳ್ಳೆಯವರಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಕ್ಷೇತ್ರ ಮತ್ತು ಗೋವಿಂದರಾಜ ನಗರ ಕ್ಷೇತ್ರದಲ್ಲಿ ಯುವಕರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ. ಈ ಬಾರಿ ಮತದಾನ ಹೆಚ್ಚಾಗಲಿದೆ ಹೊಸಬರಲ್ಲ ಸೇರಿದ್ದಾರೆ. ಜನ ಮತದಾನ ಮಾಡುತ್ತಿದ್ದಾರೆ" ಎಂದರು.
ಗೋವಿಂದರಾಜ ನಗರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಮಾತನಾಡಿ "ಮತದಾನದ ಪ್ರಕ್ರಿಯೆ ಬಹಳ ಸುಲಭವಾಗಿದೆ ಎಂದು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ. ಯಾವ ಸರ್ಕಾರದಿಂದ ನಿಮಗೆ ಒಳ್ಳೆಯದಾಗಲಿದೆ ಎನ್ನುವುದು ನಿಮಗೆ ಗೊತ್ತಿದೆ. ಹಾಗಾಗಿ ಮುಂದಿನ ಐದು ವರ್ಷಗಳ ಭವಿಷ್ಯ ಏನಾಗಬೇಕು ಎಂದು ತೀರ್ಮಾನಿಸಿ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿ" ಎಂದು ಕರೆ ನೀಡಿದರು.
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಮಾತನಾಡಿ "ಎಲ್ಲರೂ ಕಡ್ಡಾಯವಾಗಿ ಬಂದು ಮತ ಚಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಗೆ ಇರುವ ಹಕ್ಕು. ಆ ಹಕ್ಕನ್ನ ಚಲಾಯಿಸಿ ಒಬ್ಬ ಒಳ್ಳೆಯ ಜನಪ್ರತಿನಿಧಿಯನ್ಙು ದೇಶಕ್ಕೆ ಈ ರಾಜ್ಯಕ್ಕೆ ಆಯ್ಕೆ ಮಾಡಿಕೊಡಬೇಕು. ಈ ಬಾರಿ 16 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಅವರೆಲ್ಲರೂ ಬಂದು ಮತ ಹಾಕಲಿದ್ದಾರೆ. ಅವರೆಲ್ಲರಿಗೂ ಶುಭ ಕೋರುತ್ತೇನೆ" ಎಂದರು.
ಇದನ್ನೂ ಓದಿ: 'ಪ್ರಜಾಪ್ರಭುತ್ವದ ಗೆಲುವಿಗೆ ಮತ ಹಾಕಿ': ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವೋಟಿಂಗ್