ಬೆಂಗಳೂರು : ಬಿಡಿಎ ಕಾನೂನು ವಿಭಾಗ ನಿಷ್ಕ್ರೀಯವಾಗಿರೋ ಕಾರಣ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿವೆ. ಹೀಗಾಗಿ ಸಮರ್ಥ ವಕೀಲರನ್ನು ನೇಮಕ ಮಾಡುವಂತೆ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಸೂಚನೆ ನೀಡಿದ್ದಾರೆ.

ಸಿಎಂ ಸೂಚನೆ ಮೇರೆಗೆ ಪ್ರಾಧಿಕಾರದ ಪ್ರತಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುತ್ತಿರುವ ಅಧ್ಯಕ್ಷರು, ನಿನ್ನೆ ಕಾನೂನು ವಿಭಾಗದ ಸಭೆ ನಡೆಸಿ ಕೆಲ ಮಹತ್ವದ ಸೂಚನೆ ನೀಡಿದರು. ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಬಿಡಿಎಗೆ ಸಂಬಂಧಿಸಿದ 5868 ಪ್ರಕರಣ ದಾಖಲಾಗಿವೆ.
ಕೆಲ ಪ್ರಕರಣ 20-25 ವರ್ಷಗಳಿಂದಲೂ ನಡೆಯುತ್ತಿದ್ದರೂ ಅವುಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ವಕೀಲರು ನಿರಾಸಕ್ತಿ ತೋರುತ್ತಿದ್ದಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ಬಿಡಿಎ ಪರ ಆಗುವಂತಹ ಪ್ರಕರಣಗಳು ಕೈತಪ್ಪಿ ಹೋಗಿ ಸಂಸ್ಥೆಗೆ ನೂರಾರು ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾನೂನು ಘಟಕದಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುವುದು. ಇದರ ಜತೆ ಜತೆಯಲ್ಲೇ ಬಿಡಿಎಗೆ ಸಂಬಂಧಿಸಿದ ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ವಕಾಲತು ಹಾಕಿ ವಾದ ಮಂಡಿಸುವ ವಕೀಲರ ತಂಡ ರಚಿಸಲು ಅಗತ್ಯ ನೀತಿ ರೂಪಿಸಲಾಗುತ್ತದೆ. ಇದಕ್ಕೆ ಬೇಕಾದ ನಿಯಮಾವಳಿಗಳನ್ನು ರೂಪಿಸುವಂತೆ ಕಾನೂನು ಕೋಶದ ಮುಖ್ಯಸ್ಥರಾದ ನ್ಯಾ.ಮುಚ್ಚಂಡಿ ಅವರಿಗೆ ಸೂಚಿಸಿದರು.

ಅಲ್ಲದೇ, ಕೆಲವು ಏಜೆಂಟರು ಬಿಡಿಎ ವಿರುದ್ಧವೇ ಪ್ರಕರಣ ದಾಖಲು ಮಾಡಿರುವವರ ಜತೆಗೆ ಕೈಜೋಡಿಸಿದ್ದಾರೆ. ಅಂತಹವರನ್ನು ಕೆಲಸದಿಂದ ತೆಗೆದು ಹಾಕಿ ಸಮರ್ಥ ಮತ್ತು ಬಿಡಿಎಗೆ ಒಳ್ಳೆಯ ಹೆಸರನ್ನು ತರುವಂತಹ ಪ್ರಾಮಾಣಿಕರನ್ನು ನೇಮಕ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ನಿರ್ದೇಶನ ನೀಡಿದರು. ಬಾಕಿ ಇರುವ 5868 ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ್ರೆ ಸಂಸ್ಥೆಗೆ ಕನಿಷ್ಟ 50 ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ ಎಂದರು.