ಬೆಂಗಳೂರು: ಇಡೀ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದ ದೂರದೃಷ್ಟಿಗಾಗಿ ಕರ್ನಾಟಕ ವಿಷನ್ ವರದಿ ಹೊರತರಲಾಗಿದೆ. ಇದು ಐತಿಹಾಸಿಕ ದಿನವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ.ಗುರುರಾಜ್ ನೇತೃತ್ವದ ತಂಡ ಒಂದು ವರ್ಷ ಕಾಲ ಅಧ್ಯಯನಗಳು, ಸಂಶೋಧನೆಗಳು, ಸಭೆಗಳನ್ನು ನಡೆಸಿ ಈ ವರದಿ ರೂಪಿಸಿದೆ. 250ಕ್ಕೂ ಅಧಿಕ ತಜ್ಞರು ಈ ವರದಿ ರೂಪಿಸಲು ಸಲಹೆ ನೀಡಿದ್ದಾರೆ. ಬೇರೆ ದೇಶಗಳ ಉತ್ತಮ ಕ್ರಮಗಳನ್ನು ಕೂಡ ಇಲ್ಲಿ ದಾಖಲಿಸಲಾಗಿದೆ. ಟೆಲಿ ಮೆಡಿಸಿನ್, ಗ್ರಾಮೀಣ ಪ್ರದೇಶದಿಂದ ಆರಂಭವಾಗಿ ತೃತೀಯ ಹಂತದ ಆರೋಗ್ಯ ಸೇವೆ ಸೇರಿದಂತೆ ಅನೇಕ ಅಂಶಗಳನ್ನು ಇದು ಒಳಗೊಂಡಿದೆ. ಇದನ್ನು ಮುಖ್ಯಮಂತ್ರಿಗಳು ಪ್ರಧಾನಿಗಳಿಗೂ ನೀಡಲಿದ್ದಾರೆ ಎಂಬ ಆಶಾಭಾವನೆ ಇದೆ ಎಂದರು.
ಅನೇಕರು ವೈದ್ಯರ ಕೈ ಗುಣ ನಂಬುತ್ತಾರೆ. ರೋಗಿಗಳಿಗೆ ವೈದ್ಯರ ಮೇಲೆ ಇರುವ ನಂಬಿಕೆ, ಪ್ರೀತಿಯನ್ನು ಇದು ತೋರಿಸುತ್ತದೆ. ಹಾಗೆಯೇ ವೈದ್ಯರು ಹಾಗೂ ರೋಗಿಗಳ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲವೆಂದೇ ವೈದ್ಯರನ್ನು ಸೃಷ್ಟಿಸಲಾಗಿದೆ ಎಂದೂ ಹೇಳಲಾಗುತ್ತದೆ. ಆ ಮಟ್ಟಿಗೆ ಸಮಾಜ ವೈದ್ಯರನ್ನು ಗೌರವಿಸುತ್ತದೆ ಎಂದು ಹೇಳಿದರು.
![ದೇಶದಲ್ಲೇ ಮೊದಲ ಆರೋಗ್ಯ ಕ್ಷೇತ್ರಕ್ಕಾಗಿ ವಿಷನ್ ಡಾಕ್ಯುಮೆಂಟ್](https://etvbharatimages.akamaized.net/etvbharat/prod-images/kn-bng-02-national-doctors-day-minister-speech-script-7208083_24082022155709_2408f_1661336829_953.jpg)
ಮೂರು ಡೋಸ್‌ನಲ್ಲಿ ಶೇ.100 ರಷ್ಟು ಸಾಧನೆಗೆ ಶ್ರಮಿಸಿ : ಕಳೆದ ನೂರು ವರ್ಷಗಳಲ್ಲೂ ಕಾಣದ ಕೋವಿಡ್ ಸಾಂಕ್ರಾಮಿಕವನ್ನು ನಾವೆಲ್ಲರೂ ಎದುರಿಸಿದ್ದೇವೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರ ಯಶಸ್ಸು ಕಾಣಲು ವೈದ್ಯರೇ ಪ್ರಮುಖ ಕಾರಣರಾಗಿದ್ದಾರೆ. ಕೋವಿಡ್ ಲಸಿಕಾಕರಣದಲ್ಲಿ ಎರಡು ಡೋಸ್‌ಗಳಲ್ಲಿ ಶೇ.100 ರಷ್ಟು ಸಾಧನೆ ಆಗಿದೆ. ಇದಕ್ಕೂ ವೈದ್ಯರ ಶ್ರಮವೇ ಕಾರಣವಾಗಿದೆ. ಹಾಗೆಯೇ, ಮೂರನೇ ಡೋಸ್‌ನಲ್ಲೂ ಶೇ.100 ರಷ್ಟು ಸಾಧನೆ ಮಾಡಲು ಎಲ್ಲಾ ವೈದ್ಯರು ಶ್ರಮಿಸಬೇಕು ಎಂದು ಸಚಿವರು ಕೋರಿದರು.
ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆಗೆ ಸರ್ಕಾರ ಆದ್ಯತೆ ನೀಡಿದ್ದು, ಉತ್ತರ ಕರ್ನಾಟಕ ಸೇರಿದಂತೆ ಅಭಿವೃದ್ಧಿ ವಂಚಿತ ಜಿಲ್ಲೆಗಳಲ್ಲಿ 100 ಸಮುದಾಯ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಒಂದು ತಿಂಗಳಲ್ಲೇ ಇದಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ನಗರಗಳಲ್ಲಿ ಬಿಪಿಎಲ್ ಕುಟುಂಬಗಳು ಹೆಚ್ಚಿರುವ ಸ್ಥಳಗಳಲ್ಲಿ ʼನಮ್ಮ ಕ್ಲಿನಿಕ್ʼ ಆರಂಭಿಸಲಾಗುತ್ತಿದೆ. ಎರಡು ತಿಂಗಳೊಳಗೆ ಬೆಂಗಳೂರಿನಲ್ಲಿ 243 ಕ್ಲಿನಿಕ್ ಕಾರ್ಯಾರಂಭವಾಗಲಿದೆ ಎಂದರು.
ಇ-ಸಂಜೀವಿನಿ ಸೇವೆಯಲ್ಲಿ ರಾಜ್ಯ 2 ನೇ ಸ್ಥಾನದಲ್ಲಿದ್ದು, 50 ಲಕ್ಷ ಸಮಾಲೋಚನೆ ನಡೆದಿದೆ. ಹಳ್ಳಿಗಳ ಜನರು ಕೂಡ ಈ ಸೇವೆ ಬಳಸಿಕೊಳ್ಳುತ್ತಿದ್ದಾರೆ. ಕೋವಿಡ್ ರೋಗಿಗಳಿಗಾಗಿ ಆರಂಭಿಸಿದ ಕೌನ್ಸಿಲಿಂಗ್‌ನಲ್ಲೂ ಸಾಕಷ್ಟು ಸಾಧನೆಯಾಗಿದೆ. ಕೆಲ ವೈದ್ಯರ ವರ್ತನೆಯಿಂದ ಇಡೀ ವೈದ್ಯ ಸಮೂಹಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ಬಗ್ಗೆ ಚಿಂತನೆ ನಡೆಸಬೇಕು. ಕರ್ನಾಟಕ ಆರೋಗ್ಯಯುತವಾದರೆ ಸಂಪದ್ಭರಿತವಾಗುತ್ತದೆ. ಇದಕ್ಕಾಗಿ ಎಲ್ಲಾ ವೈದ್ಯರು ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಇದನ್ನೂ ಓದಿ: ಕರಿಯಣ್ಣ, ಬಿಳಿಯಣ್ಣ ಜೊತೆ ಕೆಂಪಣ್ಣ ಪತ್ರವೂ ಪಿಎಂ ಕಚೇರಿಗೆ ಹೋಗಲಿ.. ರವಿಕುಮಾರ್ ವ್ಯಂಗ್ಯ