ಬೆಂಗಳೂರು : ಮಾಗಡಿ ರಸ್ತೆಯ ಶ್ರೀ ಬಾಲಗಂಗಾಧರನಾಥ ವೃತ್ತದಲ್ಲಿ ವಿಷ್ಣುದಾದ ಪ್ರತಿಮೆ ಪುನರ್ ನಿರ್ಮಾಣಕ್ಕೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಗುದ್ದಲಿ ಪೂಜೆ ಮಾಡಿದರು.
ಕೆಲ ದಿನಗಳ ಹಿಂದೆ ಮಾಗಡಿ ರೋಡ್ನ ಟೋಲ್ ಗೇಟ್ ಬಳಿ ಪ್ರತಿಷ್ಠಾಪಿಸಲಾಗಿದ್ದ ಡಾ.ವಿಷ್ಣುವರ್ಧನ್ ಪ್ರತಿಮೆಯನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದಿದ್ರು. ಇದು ವಿಷ್ಣುವರ್ಧನ್ ಕುಟುಂಬ ಹಾಗೂ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿತ್ತು. ಇದೀಗ ಶ್ರೀ ಬಾಲಗಂಗಾಧರನಾಥ ವೃತ್ತದಲ್ಲಿ ವಿಷ್ಣು ಪ್ರತಿಮೆ ಪುನರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ.
ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುತ್ಥಳಿ ಮರು ನಿರ್ಮಾಣದ ಗುದ್ದಲಿಪೂಜೆಗೆ ನಟ ಅನಿರುದ್ಧ್ ಮತ್ತು ಸೌಮ್ಯನಾಥ ಸ್ವಾಮೀಜಿ ಚಾಲನೆ ನೀಡಿದ್ರು. ವಿಷ್ಣುವರ್ಧನ್ ಫೋಟೋಗೆ ಪುಷ್ಪಾರ್ಚನೆ ಮೂಲಕ ನೂರಾರು ವಿಷ್ಣು ಅಭಿಮಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿತು.
ವಿಷ್ಣುವರ್ಧನ್ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ಜಾಗದಲ್ಲಿ ನವಧಾನ್ಯ ಹಾಗೂ ನವ ರತ್ನಗಳನ್ನು ಹಾಕಿ ಭೂಮಿ ಪೂಜೆ ಮಾಡಲಾಗಿದೆ. ಈ ಹಿಂದೆ ವಿಷ್ಣುವರ್ಧನ್ ಪ್ರತಿಮೆ ಇದ್ದ ಜಾಗದ ಎಡಭಾಗ 15 ಮೀಟರ್ ದೂರದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು.
ಸಚಿವ ವಿ. ಸೋಮಣ್ಣ ಪ್ರತಿಮೆ ನಿರ್ಮಾಣ ಮಾಡುವುದಾಗಿ ವಿಷ್ಣು ಸೇನಾ ಸಮತಿಗೆ ಭರವಸೆ ನೀಡಿದ್ದು, ಅವ್ರಿಗೆ ಅನಿರುದ್ಧ್ ಅಭಿನಂದನೆ ತಿಳಿಸಿದ್ದಾರೆ. ಅಭಿಮಾನಿಗಳ ಇಚ್ಛೆಯಂತೆ ಸೋಮಣ್ಣ ಜೊತೆ ವಿಷ್ಣು ಪುತ್ಥಳಿ ನಿರ್ಮಾಣ ಮಾಡಬೇಕೆಂದು ಕೇಳಿದ್ದಕ್ಕೆ ಅವರು ಒಪ್ಪಿರೋದ್ರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ.
ರಾಜ್ಯಕ್ಕೆ ಈ ಜಾಗದಲ್ಲಿರುವ ಪುತ್ಥಳಿ ಮಾದರಿಯಾಗಬೇಕು. ಹಾಗೇ 6 ಅಡಿ ನಿಂತಿರುವ ಆಯಾಮದಲ್ಲಿ ಕಂಚಿನ ಪುತ್ಥಳಿ ಆಗಬೇಕಿದೆ ಅಂತಾ ಅನಿರುದ್ಧ್ ಹೇಳಿದ್ದಾರೆ. ಸಾಹಸ ಸಿಂಹನ ಅಭಿಮಾನಿಗಳು, ಪುತ್ಥಳಿ ನಿರ್ಮಾಣ ಜಾಗದಲ್ಲಿ ವಿಷ್ಣುವರ್ಧನ್ ದೊಡ್ಡ ಫೋಟೋ ಇಟ್ಟು ಪೂಜೆ ಮಾಡಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ:ಮನೆಗೆ ಮರಳಿದ ರಜಿನಿಕಾಂತ್ರನ್ನು ಆರತಿ ಮಾಡಿ ಬರಮಾಡಿಕೊಂಡ ಪತ್ನಿ