ಬೆಂಗಳೂರು: ಪ್ರತಿಷ್ಠಿತ ಪಾರ್ಟಿ ಆಯೋಜಕನಾಗಿರುವ ದೆಹಲಿ ಮೂಲದ ವಿರೇನ್ ಖನ್ನಾನನ್ನ ಸಿಸಿಬಿ ಪೊಲೀಸರು ಒಮ್ಮೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ ಮತ್ತೆ ವಿಚಾರಣೆಗೆ ವಶಕ್ಕೆ ಪಡೆದು ಇದೀಗ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರತಿಷ್ಠಿತ ಸ್ಟಾರ್ ಹೋಟೆಲ್ಗಳಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ಸ್ ಪೂರೈಸುತ್ತಿದ್ದ ಆರೋಪಿ ವಿರೇನ್ ಖನ್ನಾನಿಂದ ಡ್ರಗ್ಸ್ ಮಾಫಿಯಾದ ಕುರಿತ ಮಾಹಿತಿ ಪಡೆಯಲು ಸಿಸಿಬಿ ಮತ್ತೆ ವಶಕ್ಕೆ ಪಡೆದಿದೆ.
ಸದ್ಯ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ 33ನೇ ಸಿಸಿಹೆಚ್ ಕೋರ್ಟ್ ನಿಂದ ಅನುಮತಿ ಪಡೆದು, ಸಿಸಿಬಿ ಇನ್ಸ್‌ಪೆಕ್ಟರ್ ಮಹಮ್ಮದ್ ಸಿರಾಜ್ ನೇತೃತ್ವದಲ್ಲಿ ಆರೋಪಿ ವಿರೇನ್ ಖನ್ನಾನನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಆರೋಪಿ ಆಯ್ದ ಹೈಫೈ ವಿದೇಶಿ ಮಹಿಳೆಯರ ಜೊತೆ ಲಿಂಕ್ ಹೊಂದಿರುವ ಮಾಹಿತಿ ಬಯಲಾಗಿದೆ. ಈ ವಿದೇಶಿ ಮಹಿಳೆಯರನ್ನ ಕೂಡ ಪಾರ್ಟಿಗೆ ಆಹ್ವಾನಿಸಿ ಡ್ರಗ್ಸ್ ಪೂರೈಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಸದ್ಯ ದೆಹಲಿ ಮೂಲದ ವಿರೇನ್ ಖನ್ನಾನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿ ಬಹುತೇಕ ಪೆಡ್ಲರ್ಗಳನ್ನು ಮಟ್ಟ ಹಾಕಲು ಮುಂದಾಗಿದ್ದಾರೆ.