ಬೆಂಗಳೂರು: ಬಿಜೆಪಿ ಪಕ್ಷ ಸಂಘಟನೆ ಮಾಡಿದ ಎಲ್ಲ ಪ್ರಮುಖರು ಬುಧವಾರ ಬೆಳಗ್ಗೆ 9.30ಕ್ಕೆ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಹಿರಂಗ ಪತ್ರದ ಮೂಲಕ ಆಹ್ವಾನ ನೀಡಿದ್ದಾರೆ.
ಹಿರಿಯರ ತ್ಯಾಗ, ತಪಸ್ಸು, ಹೋರಾಟದ ಫಲವಾಗಿ ಭಾರತದ ಸಾರ್ವಭೌಮತ್ವ ರಕ್ಷಿಸುವ ಹಾಗೂ ದೇಶ ಕಟ್ಟುವ ಉದಾತ್ತ ಉದ್ದೇಶದೊಂದಿಗೆ ಉದಯಿಸಿದ ನಮ್ಮ ಭಾರತೀಯ ಜನತಾ ಪಾರ್ಟಿ ಇಂದು ದೇಶವ್ಯಾಪಿ ಪಸರಿಸಿ ವಿಶ್ವಮಟ್ಟದಲ್ಲಿ ಒಂದು ಬಲಿಷ್ಠ ರಾಜಕೀಯ ಸಂಘಟನೆಯಾಗಿ ಹೊರಹೊಮ್ಮಿದೆ. ದಕ್ಷಿಣ ಭಾರತದಲ್ಲಿ ನಮ್ಮ ಬಿಜೆಪಿ ಪಕ್ಷಕ್ಕೆ ಹೆಬ್ಬಾಗಿಲು ತೆರೆದುಕೊಟ್ಟಿದ್ದು, ನಮ್ಮ ಹೆಮ್ಮೆಯ ಕರ್ನಾಟಕ, ಈ ಹಿನ್ನೆಲೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಈ ವರೆಗೂ ಸೇವೆ ಸಲ್ಲಿಸಿದ ಹಾಗೂ ಪಕ್ಷ ಸಂಘಟಿಸಿದ ಮಹನೀಯರೆಲ್ಲರನ್ನೂ ಈ ಸಂದರ್ಭದಲ್ಲಿ ನಾನು ಅತ್ಯಂತ ವಿನಮ್ರತೆಯಿಂದ ನೆನಪಿಸಿಕೊಳ್ಳಬಯಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜವಾಬ್ದಾರಿ ಶ್ರದ್ಧೆಯಿಂದ ನಿರ್ವಹಿಸುವ ಸಂಕಲ್ಪ: ನಿಮ್ಮ ಸಮರ್ಪಣಾ ಮನೋಭಾವದ ಬದ್ಧತೆಯ ಸೇವೆ ನನಗೆ ಸದಾ ಪ್ರೇರಣೆಯಾಗಲಿದೆ. ಪಕ್ಷದ ಹಿರಿಯರು ಅಲಂಕರಿಸಿದ ಜವಾಬ್ದಾರಿ ಸ್ಥಾನದಲ್ಲಿ ಕುಳಿತು ಪಕ್ಷ ಸಂಘಟಿಸುವ ಮಹತ್ವದ ಅವಕಾಶವನ್ನು, ಪಕ್ಷದ ವರಿಷ್ಠರು ನನಗೆ ದಯಪಾಲಿಸಿದ್ದಾರೆ. ಒಬ್ಬ ಕಾರ್ಯಕರ್ತನಾಗಿ ಕಾರ್ಯಕರ್ತರೊಂದಿಗೆ ಬೆರತು ಈ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸುವ ಸಂಕಲ್ಪ ತೊಟ್ಟಿದ್ದೇನೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಆಶೀರ್ವಾದ, ಮಾರ್ಗದರ್ಶನ, ಸಹಕಾರ ನನಗೆ ಶ್ರೀರಕ್ಷೆಯಾಗಲಿದೆ ಎಂದು ಪತ್ರದಲ್ಲಿ ವಿಜಯೇಂದ್ರ ಆಹ್ವಾನಿಸಿದ್ದಾರೆ.
ಸದ್ಯ ವರಿಷ್ಠರು ನನ್ನ ಮೇಲೆ ನಂಬಿಕೆಯನ್ನಿರಿಸಿ ವಹಿಸಿರುವ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಈ ವರೆಗೂ ಅತ್ಯಂತ ಸಮರ್ಥ ಹಾಗೂ ಕ್ರಿಯಾಶೀಲವಾಗಿ ನಿರ್ವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ ನವೆಂಬರ್ 15ರಂದು ಬೆಳಗ್ಗೆ 9:30 ಗಂಟೆಗೆ ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸುತ್ತಿದ್ದೇನೆ.
ತಾವು ತಪ್ಪದೇ ಈ ಪದಗ್ರಹಣ ಸಮಾರಂಭದಲ್ಲಿ ಹಾಜರಿರಬೇಕೆಂದು ಎಂದು ಪಕ್ಷದ ಶಾಸಕರು,ಸಂಸದರು, ಪರಿಷತ್ ಸದಸ್ಯರು,ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಎಂಎಲ್ಸಿಗಳು, ಜಿಲ್ಲಾಧ್ಯಕ್ಷರಿಗೆ ವಿಜಯೇಂದ್ರ ಬಹಿರಂಗ ಪತ್ರ ಬರೆದಿದ್ದಾರೆ. ಜೊತೆಗೆ ಪಕ್ಷದ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲ ಕಾರ್ಯಕರ್ತರನ್ನೂ ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.
ಬಿಜೆಪಿ ಕಚೇರಿ ಕೇಸರಿಮಯ: ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನಾಳೆ ಅಧಿಕಾರ ಸ್ವೀಕಾರ ಮಾಡುವ ಹಿನ್ನೆಲೆ ಬಿಜೆಪಿ ಕಚೇರಿಯ ಒಂದು ಕಿಲೋ ಮೀಟರ್ ಸುತ್ತಮುತ್ತ ಕೇಸರಿಮಯವಾಗಿದೆ. ಈ ರಸ್ತೆ ಉದ್ದಕ್ಕೂ ಬಿಜೆಪಿ ಪಕ್ಷದ ಬಾವುಟಗಳು ರಾರಾಜಿಸುತ್ತಿವೆ.
ಇದನ್ನೂ ಓದಿ : ದೇವೇಗೌಡರ ಆಶೀರ್ವಾದ ಪಡೆದ ವಿಜಯೇಂದ್ರ: ಬಿಜೆಪಿ ನೂತನ ರಾಜ್ಯಾಧ್ಯಕ್ಷರಿಗೆ ದೊಡ್ಡಗೌಡರ ಸಲಹೆ ಏನು?