ಬೆಂಗಳೂರು : ವಿಜಯನಗರ ಜಿಲ್ಲೆಯಾಗಿ ಘೋಷಣೆ ಮಾಡಲು ಸಚಿವ ಸಂಪುಟ ತಾತ್ವಿಕ ಅನುಮೋದನೆ ಸೇರಿದಂತೆ 2021 ನೇ ಸಾಲಿನಲ್ಲಿ 21 ಸಾರ್ವತ್ರಿಕ ರಜೆ ಮತ್ತು 19 ನಿರ್ಬಂಧಿತ ರಜೆ ಸೇರಿದಂತೆ ಹಲವು ವಿಷಯಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಡಿಸೆಂಬರ್ 7 ರಿಂದ 15ರವರಗೆ ಬೆಂಗಳೂರಿನಲ್ಲೇ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಪ್ರಾಧಿಕಾರದ ಬದಲು ಮರಾಠ ನಿಗಮ : ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಾಧಿಕಾರ ಮಾಡಬೇಕಾದರೆ ಕಾನೂನು ಮಾಡಬೇಕು. ಆದರೆ ನಿಗಮಕ್ಕೆ ಸರ್ಕಾರವೇ ನಿರ್ಧಾರ ಕೈಗೊಳ್ಳಬಹುದು. ಹಣ ಎಷ್ಟು ನಿಗದಿ ಮಾಡಬೇಕು ಎಂಬುದು ಇನ್ನೂ ಚರ್ಚೆಯಾಗಿಲ್ಲ. ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಅಭಿವೃದ್ದಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಹೊಸ ಜಿಲ್ಲೆಗೆ ಒಪ್ಪಿಗೆ : ವಿಜಯನಗರ ಜಿಲ್ಲೆಯಾಗಿ ಘೋಷಣೆ ಮಾಡಲು ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ. ಇದರ ರೂಪು ರೇಷೆ ಸಿದ್ಧಪಡಿಸುವ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಪ್ರವಾಹ ಪೀಡಿತ ಜಿಲ್ಲೆಗಳಿಗೆ 1000 ಕೋಟಿ ರೂ. ಬಿಡುಗಡೆ ಮಾಡಿ ಪರಿಹಾರ ಕಾಮಗಾರಿ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೆಪಿಎಸ್ಸಿಗೆ ಇದ್ದ ಅಧಿಕಾರ ಮೊಟಕು : ಸರ್ಕಾರಿ ಅಧಿಕಾರಿಗಳ ವಿರುದ್ಧ ಕರ್ತವ್ಯ ನಿರ್ಲಕ್ಷ್ಯ ಅಥವಾ ಲೋಪಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಪ್ರಸ್ತುತ ಕೆಪಿಎಸ್ಸಿಯ ಅನುಮತಿ ಅಗತ್ಯವಾಗಿತ್ತು. ಇನ್ನು ಮುಂದೆ ಸರ್ಕಾರವೇ ನೇರವಾಗಿ ಕ್ರಮ ಕೈಗೊಳ್ಳುವ ಸಂಬಂಧ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಈ ಮೂಲಕ ಕೆಪಿಎಸ್ಸಿಗೆ ಇದ್ದ ಅಧಿಕಾರ ಮೊಟಕುಗೊಳಿಸಿದಂತಾಗಿದೆ ಎಂದರು.