ಬೆಂಗಳೂರು: ಮೂರನೇ ಹಂತದ ಲಾಕ್‌ಡೌನ್ ಅಂತ್ಯಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ವಿಡಿಯೋ ಸಂವಾದ ನಡೆಸಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗಳು ಭಾಗವಹಿಸಿದ್ದರು. ಕೊರೊನಾ ಸೋಂಕು ನಿಯಂತ್ರಣ ಮತ್ತು ಲಾಕ್‌ಡೌನ್ ಸಂಬಂಧ ಸಲಹೆ- ಸೂಚನೆಗಳನ್ನು ನೀಡಿದರು. ಜಿಲ್ಲಾ ಮಟ್ಟದಲ್ಲಿನ ಕೊರೊನಾ ಪರಿಸ್ಥಿತಿ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿದರು. ಜಿಲ್ಲೆಗಳಲ್ಲಿನ ಕಂಟೈನ್ಮೆಂಟ್ ವಲಯಗಳಲ್ಲಿನ ಸ್ಥಿತಿಗತಿ, ಕಂಟೈನ್ಮೆಂಟ್ ಝೋನ್ಗಳ ಬಗ್ಗೆ ವಿವರಣೆ ಪಡೆದಿದ್ದಾರೆ.
ಹೊರ ರಾಜ್ಯಗಳಿಂದ ಬಂದವರ ಕ್ವಾರಂಟೈನ್ ವ್ಯವಸ್ಥೆ, ಸೋಂಕು ಪತ್ತೆ ಬಗ್ಗೆಯೂ ಮುಖ್ಯ ಕಾರ್ಯದರ್ಶಿ ವಿವರಣೆ ಕೇಳಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾದ ಬಳಿಕದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಕೇಂದ್ರ ಸರ್ಕಾರ ನಾಳೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಂದಲೂ ಅಭಿಪ್ರಾಯ ಕೇಳಿದ್ದಾರೆ. ಪ್ರಯಾಣ ಬೆಳೆಸುವವರಿಂದ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಪ್ರಯಾಣಿಕರ ಮೇಲೆ ಹೆಚ್ಚಿನ ಗಮನವಹಿಸಿ, ಅವರನ್ನು ಕ್ವಾರಂಟೈನ್ ಮಾಡುವಂತೆ ಸಿ.ಎಸ್. ವಿಜಯಭಾಸ್ಕರ್ ಸೂಚಿಸಿದ್ದಾರೆ.