ನೆಲಮಂಗಲ: ಕನ್ನಡ ಹಿರಿಯ ನಟಿ ಡಾ.ಲೀಲಾವತಿ ಅವರದ್ದು ಭಗವಂತನ ಹೃದಯ, ತಾವು ವಾಸಿಸುವ ಜನರ ಕಷ್ಟಗಳಿಗೆ ಮಿಡಿಯುವ ಮನಸ್ಸು, ತಮಗೆ ಬರುವ ಅಲ್ಪ ಆದಾಯದಲ್ಲಿ ಸಾರ್ವಜನಿಕ ಆಸ್ಪತ್ರೆ ಕಟ್ಟಿಸಿದ್ದರು. ಈಗ ಮೂಕ ಪ್ರಾಣಿಗಳ ಚಿಕಿತ್ಸೆಗಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಪಶು ವೈದಕೀಯ ಆಸ್ಪತ್ರೆಯನ್ನ ನಿರ್ಮಾಣ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಸ್ಪತ್ರೆಯನ್ನ ಇಂದು ಉದ್ಘಾಟನೆ ಮಾಡಿದರು.
ಲೀಲಾವತಿಯವರ ಮಗ ವಿನೋದ್ ರಾಜ್ ತಮ್ಮ ತಾಯಿ ಅವರು ಮೂಕ ಪ್ರಾಣಿಗಳ ಮೇಲಿನ ಪ್ರೀತಿಯನ್ನ ಬಿಚ್ಚಿಟ್ಟರು, ಲೀಲಾವತಿ ಅಮ್ಮನವರಿಗೆ ಮನುಷ್ಯರಿಗಿಂತ ಮೂಕ ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚು, ಚೆನೈನ ಟಿ.ನಗರದಲ್ಲಿ ವಾಸವಾಗಿದ್ದಾಗ ತಮಗೆ ತಿನ್ನಲು ಇಲ್ಲದಿದ್ದ ಸಮಯದಲ್ಲೂ ಮನೆಯಲ್ಲಿ ಬೆಕ್ಕು ನಾಯಿಗಳನ್ನ ಸಾಕಿಕೊಂಡಿದ್ರು. ಶೂಟಿಂಗ್ ಮುಗಿಸಿ ಮನೆಗೆ ಬಂದ ನಂತರ ಅವುಗಳಿಗೆ ಊಟ ಮಾಡಿಸಿ ಹಾಕಿದ ನಂತರನೇ ತಾವು ಊಟ ಮಾಡುತ್ತಿದ್ದರು. ಸದ್ಯ ನಮ್ಮ ತೋಟದಲ್ಲಿ 12 ನಾಯಿಗಳನ್ನ ಸಾಕಿದ್ದಾರೆ.
ತಮ್ಮನ್ನು ನಂಬಿದವರಿಗೆ ಊಟ ಹಾಕಬೇಕು ಆಶ್ರಯ ನೀಡಬೇಕು ಎಂಬುದು ಅವರ ಆಸೆ, ಆ ನಿಟ್ಟಿನಲ್ಲಿ , ಅದನ್ನ ಮಾಡುವುದಕ್ಕೆ ಭಗವಂತ ಸಹ ಯಾವುದೇ ತೊಂದರೆಯನ್ನ ನಮ್ಮ ತಾಯಿಗೆ ಕೊಟ್ಟಿಲ್ಲ, ತಮಗೆ ಬರುತ್ತಿದ್ದ ಅಲ್ಪ ಆದಾಯದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ರು, ಸಾಮಾಜಿಕ ಸೇವೆ ಮಾಡುವ ಮುನ್ನ ನನ್ನ ಬಳಿ ಚರ್ಚೆ ಮಾಡಿದ ನಂತರ ಸೇವೆಯಲ್ಲಿ ತೊಡಗಿದ್ದರು.
ಪ್ರಾರಂಭದಲ್ಲಿ ಆಸ್ಪತ್ರೆ ಕಟ್ಟಲಾಗಿತ್ತು. ಇವತ್ತು ನೂರಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಒಬ್ಬರೇ ಡಾಕ್ಟರ್ ಇದ್ದು, ಮತ್ತೊಬ್ಬರು ವೈದ್ಯರು ಮತ್ತು ಗ್ರೂಪ್ ನೌಕರರು ಸಹಾಯಕರನ್ನ ಕೊಟ್ಟರೇ ಆಸ್ಪತ್ರೆಯಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಪಶು ಆಸ್ಪತ್ರೆಯನ್ನ ಕಟ್ಟಿಸುವುದು ನಮ್ಮ ತಾಯಿಯ ಆಸೆ, ಅವರದ್ದು ಭಗವಂತನ ಹೃದಯ, ಬೀದಿಯಲ್ಲಿ ಬಿದ್ದ ನಾಯಿಗಳನ್ನು ಸಾಕಿ ಅದನ್ನು ಸರಿ ಮಾಡಿ ಬಿಡುತ್ತಿದ್ದರು, ಒಮ್ಮೆ ಸ್ಕಾರ್ಪಿಯೋ ಕಾರಿನಲ್ಲಿ ವೇಗವಾಗಿ ಹೋಗುವಾಗ ಪಾರಿವಾಳ ಕಾರಿಗೆ ಡಿಕ್ಕಿ ಹೊಡೆದು ಬಿದ್ದು ಹೋಯ್ತು. ಕಾರಿನಿಂದ ಇಳಿದ ಅವರು, ಪಾರಿವಾಳದ ಕೊಕ್ಕು ಹಿಡಿದು ತಮ್ಮ ಬಾಯಿಂದ ಗಾಳಿಯನ್ನ ಉದಿದರು, ತಕ್ಷಣವೇ ಪಾರಿವಾಳ ಚೇತರಿಸಿಕೊಂಡಿತು.
ನಮ್ಮ ತಾಯಿ 2ನೇ ತರಗತಿ ಓದಿದ್ದರು, ಪಶು ಆಸ್ಪತ್ರೆಯನ್ನ ಜನರ ಆಸ್ಪತ್ರೆಗಿಂತ ಚೆನ್ನಾಗಿ ಕಟ್ಟಿಸುವಂತೆ ಹೇಳಿದ್ರು. ಅದಕ್ಕಾಗಿ ಡಾಕ್ಟರ್ ಕೊಠಡಿ, ಶೌಚಾಲಯ, ಪ್ರಯೋಗಾಲಯ, ಶಸ್ತ್ರ ಚಿಕಿತ್ಸಾಲಯ, ಸ್ಟೋರೆಜ್ ರೂಮ್ , ಸೆಕ್ಯೂರಿಟಿ ಕೊಠಡಿ, ಸಾರ್ವಜನಿಕ ಶೌಚಾಲಯ, ದೊಡ್ಡ ಪ್ರಾಣಿಗಳ ಚಿಕಿತ್ಸೆಗಾಗಿ ಹೊರಭಾಗದಲ್ಲಿ ಡೆಕ್ ನಿರ್ಮಾಣ ಸಹ ಮಾಡಲಾಗುವುದು, ಇದಕ್ಕಾಗಿ ಒಟ್ಟು ಸುಮಾರು 50 ಲಕ್ಷ ಹಣ ಖರ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಡಿಸಿಎಂ ಡಿಕೆಶಿ, ಶಿವಣ್ಣ ಭೇಟಿ; ಆರೋಗ್ಯ ವಿಚಾರಣೆ