ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಆಂತರಿಕ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಉಸ್ತುವಾರಿ ಆಗಮಿಸಿರುವ ಬೆನ್ನಲ್ಲೇ ನಾಯಕತ್ವ ಬದಲಾವಣೆ ಮಾಡದಂತೆ ವೀರಶೈವ ಲಿಂಗಾಯತ ಯುವ ವೇದಿಕೆ ಆಗ್ರಹಿಸಿದೆ. ರಾಜ್ಯ ಬಿಜೆಪಿ ಪಾಳಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಸಿಎಂ ಅಧಿಕೃತ ನಿವಾಸ ಕಾವೇರಿ, ಗೃಹ ಕಚೇರಿ ಕೃಷ್ಣಾ, ಬಿಜೆಪಿ ಕಚೇರಿ, ಕುಮಾರಕೃಪಾ ಅತಿಥಿಗೃಹದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ನಾಯಕತ್ವ ಬೆಂಬಲಿಸಿ ಬೆಂಬಲಿಗರ ಪಡೆ ಯಡಿಯೂರಪ್ಪ ಪರ ನಿಷ್ಠೆ ವ್ಯಕ್ತಪಡಿಸಿದೆ.
ಈ ನಡುವೆ ವೀರಶೈವ ಲಿಂಗಾಯತ ಯುವ ವೇದಿಕೆ ಸಿಎಂ ಬೆಂಬಲಕ್ಕೆ ನಿಂತಿದೆ. ವಯಸ್ಸಾಗಿದೆ ಎನ್ನುವ ಕಾರಣ ಮುಂದಿಟ್ಟು ನಾಯಕತ್ವ ಬದಲಾವಣೆ ಮಾಡಲು ಮುಂದಾದರೆ ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ನೀಡಿದೆ. ಈ ಕುರಿತು ಪತ್ರ ಬಿಡುಗಡೆ ಮಾಡಿರುವ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್, ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಸಿಎಂ ಹುದ್ದೆಯಿಂದ ಬದಲಾಯಿಸಬಾರದು ಎಂದು ಒತ್ತಾಯಿಸಿದ್ದಾರೆ.
ಕೆಲವರು ಅನವಶ್ಯಕವಾಗಿ ಯಡಿಯೂರಪ್ಪನವರ ಘನತೆ, ಗೌರವಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿ, ಮಾನಸಿಕವಾಗಿ ನೋವುಂಟು ಮಾಡುವಂತೆ ನಡೆದುಕೊಳ್ಳುತ್ತಿರುವುದು ಯಡಿಯೂರಪ್ಪನವರಿಗಷ್ಟೇ ಅಲ್ಲ, ಇಡೀ ವೀರಶೈವ-ಲಿಂಗಾಯತ ಸಮಾಜಕ್ಕೆ ಮಾಡುವಂತಹ ಅವಮಾನವಾಗುತ್ತದೆ ಎಂದರು. ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯವರು 15 ವರ್ಷಗಳ ಕಾಲ ಗಾಲಿ ಕುರ್ಚಿಯಲ್ಲಿ ಅಧಿಕಾರ ನಡೆಸಿದ್ದಾರೆ.
ನಮ್ಮ ರಾಜ್ಯದ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ ದೇವೇಗೌಡರು ಯುವಕರು ನಾಚುವಂತಹ ರೀತಿಯಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅಂತಯೇ ಬಿ ಎಸ್ ಯಡಿಯೂರಪ್ಪನವರು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ. ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುವಂತಹ ಸಾಮರ್ಥ್ಯವನ್ನು ಹೊಂದಿರುವುದರಿಂದ ಅನಾವಶ್ಯಕ ಗೊಂದಲ ಸೃಷ್ಟಿ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವುದು ಸೂಕ್ತವಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು, ಶಾಸಕರು ಗೆಲ್ಲಲು ಯಡಿಯೂರಪ್ಪನವರ ಪಾತ್ರ ಪ್ರಮುಖವಾಗಿದೆ. ಸರ್ಕಾರ ರಚಿಸುವಲ್ಲಿ ಅನೇಕ ವ್ಯಕ್ತಿಗಳ ತ್ಯಾಗ ಮತ್ತು ಹೋರಾಟದ ಫಲ ಕಾರಣವಾಗಿರುತ್ತದೆ. ಹೀಗಿರುವಾಗ ಅನವಶ್ಯಕವಾಗಿ ಕೆಲವರು ಯಡಿಯೂರಪ್ಪನವರಿಗೆ ತೊಂದರೆ ನೀಡುತ್ತಿರುವುದನ್ನು ವೀರಶೈವ ಲಿಂಗಾಯತ ಯುವ ವೇದಿಕೆ ಖಂಡಿಸುವುದಾಗಿ ತಿಳಿಸಿದರು.