ಬೆಂಗಳೂರು: ಗಡಿಯಲ್ಲಿ ಮಹಾರಾಷ್ಟ್ರದ ಸಚಿವರಾದ ಪಾಟೀಲ್, ದೇಸಾಯಿ ಅವರನ್ನು ಬಂಧನ ಮಾಡಿ. ಅವರನ್ನು ಕರ್ನಾಟಕಕ್ಕೆ ಬರಲು ಬಿಡಬೇಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮಂತ್ರಿಗಳಾದ ಪಾಟೀಲ್, ದೇಸಾಯಿ, MES ನವರು ಕರೆದಿದ್ದಾರೆ ಮಾತನಾಡಲು ಬರುತ್ತೇವೆ ಎಂದು ಹೇಳಿದ್ದಾರೆ. ಅವರನ್ನು ಬೆಳಗಾವಿ ಜೈಲಿನಲ್ಲಿ ಇಡಿ ಎಂದು ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಗಡಿನಾಡಿನ ಸಮಸ್ಯೆ ಬಹಳ ಗಂಭೀರವಾಗಿದೆ. ಮಹಾರಾಷ್ಟ್ರ ಸರ್ಕಾರದವರು ಉದ್ದೇಶಪೂರ್ವಕವಾಗಿ ದಾಳಿ ಮಾಡುತ್ತಿದ್ದಾರೆ. ಬಾಳಾ ಠಾಕ್ರೆ ಇದ್ದಾಗ ಆಮೇಲೆ, ಶಿಂಧೆ, ಫಡ್ನವಿಸ್ ಕರ್ನಾಟಕ ಮೇಲೆ ಕೆಟ್ಟ ದಾಳಿ ಮಾಡುತ್ತಿದ್ದಾರೆ. ಕರ್ನಾಟಕದ ಮೇಲೆ ಇದೊಂದು ರಾಜಕೀಯ ಧೋರಣೆ. ರಾಜ್ಯ ಪುನರ್ ವಿಂಗಡಣೆ ಕಾಲದಿಂದಲೂ ಬೆಳಗಾವಿ, ಕಾರವಾರ, ನಿಪ್ಪಾಣಿ ಹಳ್ಳಿಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಅವರು ಸ್ಪಷ್ಟಪಡಿಸಿದರು.
ಇಂದಿರಾಗಾಂಧಿ ಅವರಿಂದ ಮಹಾಜನ್ ಆಯೋಗ ರಚನೆ : ವೈವಿ ಚೌಹಾಣ್ ಗೃಹ ಮಂತ್ರಿಯಾಗಿದ್ದಾಗ ಮಹಾಜನ್ ವರದಿ ನೇಮಕ ಆಗಿದೆ. ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಒಂದು ತೀರ್ಮಾನಕ್ಕೆ ಬಂದರು. ಮೊದಲು ನಾವು ಯಾವುದೇ ಆಯೋಗಕ್ಕೆ ಒಪ್ಪಿರಲಿಲ್ಲ. ಮಹಾರಾಷ್ಟ್ರ ದವರು ಒತ್ತಾಯಿಸಿದ್ರು, ಆದರೆ, ನಮ್ಮ ರಾಜ್ಯ ಆಯೋಗಕ್ಕೆ ತೀವ್ರವಾಗಿ ವಿರೋಧಿಸಿತು.
ಇಂದಿರಾಗಾಂಧಿ ಪ್ರಧಾನಮಂತ್ರಿಯಾಗಿದ್ದಾಗ ಒತ್ತಾಯ ಮಾಡಿ ಮಹಾಜನ್ ಆಯೋಗ ಮಾಡಿದರು. ಮಹಾಜನ್ ತೀರ್ಪು ಬೆಳಗಾವಿ, ಕಾರವಾರ, ನಿಪ್ಪಾಣಿ, ಕಾಸರಗೋಡು, ಸೊಲ್ಲಾಪುರ ಕರ್ನಾಟಕದ್ದೇ ಎಂದು ಹೇಳಿದರು. ಮಹಾರಾಷ್ಟ್ರದವರು ಅದನ್ನು ಒಪ್ಪದೇ ಗಲಾಟೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ : ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆ ಗಲಾಟೆ ಮಾಡುತ್ತಿದೆ. ಪ್ರಧಾನ ಮಂತ್ರಿಗಳು ಮಹಾರಾಷ್ಟ್ರದವರಿಗೆ ಗಂಭೀರವಾಗಿರಲು ತಿಳಿಸಬೇಕು. ಸುಪ್ರೀಂಕೊರ್ಟ್ ನಲ್ಲಿ ಕೇಸ್ ಬರುತ್ತಿದೆ ನಮ್ಮ ಸರ್ಕಾರ ಎಚ್ಚರ ವಹಿಸಬೇಕು. ಕರ್ನಾಟಕ ಸರ್ಕಾರಕ್ಕೆ ಜವಾಬ್ದಾರಿ ಇಲ್ಲ, ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ. ಸುವರ್ಣ ಸೌಧವನ್ನು ನಾಮಕೇವಾಸ್ತೆಗೆ ಕಟ್ಟಿಸಿದ್ದಾರೆ ಎಂದು ಕಿಡಿ ಕಾರಿದರು.
ಒಂದಗಲ ಜಾಗ ಬಿಡುವ ಪ್ರಶ್ನೆಯೇ ಇಲ್ಲ : ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಗಂಭೀರವಾದ ಪರಿಸ್ಥಿತಿ ನಿರ್ಮಾಣವಾದರೆ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿಯಾಗುತ್ತದೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರದವರಿಗೆ ಒಂದಗಲ ಜಾಗ ಬಿಡುವ ಪ್ರಶ್ನೆಯೇ ಇಲ್ಲ. ಕರ್ನಾಟಕದ ಉದ್ದಗಲಕ್ಕೂ ಭಾರೀ ಹೋರಾಟ ಅನಿವಾರ್ಯ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಮೈಸೂರು ಬಸ್ ನಿಲ್ದಾಣ ವಿವಾದ.. ಇಬ್ಬರು ಅವಿವೇಕಿಗಳ ಜಗಳ ವಾಟಾಳ್ ವಾಗ್ದಾಳಿ