ಬೆಂಗಳೂರು: ದಿನ ಬಳೆಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮೊನ್ನೆಯವರೆಗೂ ಟೊಮೆಟೊ ಚಿನ್ನದ ಬೆಲೆಯ ರೀತಿಯಲ್ಲಿ ಮಾರಾಟವಾಯ್ತು, ಜನಸಮಾನ್ಯರಿಗೆ ಕೈಗೆಟುಕದಂತಾಗಿತ್ತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬೆಲೆ ಏರಿಕೆ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಕೇಳುವರಿಲ್ಲ, ಹೇಳುವರಿಲ್ಲ ಎನ್ನುವ ಪರಿಸ್ಥಿತಿ ಸ್ವಾತಂತ್ರ್ಯ ಬಂದು 77 ವರ್ಷವಾದರೂ ದೇಶ ಮತ್ತು ರಾಜ್ಯದಲ್ಲಿ ಉಂಟಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಗಾಂಧೀಜಿ ಅವರ ಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸ್ವಾತಂತ್ರ್ಯ ದಿನವನ್ನು ಆಚರಿಸುವ ಜೊತೆಗೆ ತಳ್ಳುವ ಗಾಡಿಯಲ್ಲಿ ತರಕಾರಿಗಳನ್ನು ಮಾರಿ ವಿನೂತನ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಲಂಚಕೋರತನ, ಭ್ರಷ್ಟಾಚಾರದಿಂದ ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೂ ಸರಿಯಾಗಿ ಹಣ ಸಿಗದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಮೇಕೆದಾಟು ಪಾದಯಾತ್ರೆ ಮಾಡಿತ್ತು. ತಮ್ಮ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದರೆ ಹೊರತು ಕನ್ನಡ ಮತ್ತು ರೈತ ಪರ ಹೊರಟಗಾರರ ಮೇಲಿನ ಪ್ರಕರಣಗಳನ್ನು ಹಾಗೆಯೇ ಉಳಿಸಿದ್ದಾರೆ. ಮತ್ತೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದು ಮುಂದುವರೆದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ವಾಟಾಳ್ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ. ಮೇಕೆದಾಟು ಯೋಜನೆಯನ್ನು ಸಹ ನಿರ್ಲಕ್ಷಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿ ಅವರ ಹೋರಾಟದ ಉದ್ದೇಶ ಮರೆತು ನೆಡೆಯುತ್ತಿರುವುದು ಇದಕ್ಕೆಲ್ಲ ಕಾರಣ. ರಾಜಕಾರಣಿಗಳು ಜನಪರ ಕೆಲಸವನ್ನು ಬಿಟ್ಟು ಲೂಟಿಗೆ ಇಳಿದಿರುವುದು ಶೋಚನೀಯ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೊಲೆ ಸುಲಿಗೆ, ಆತ್ಮಹತ್ಯೆ ನಿತ್ಯ ನಿರಂತರವಾಗಿ ನೆಡಯುತ್ತಿದೆ. ರೈತರ ಬೆಳೆ ನಾಶದ ಬಗ್ಗೆ ಕಿಂಚಿತ್ತೂ ಯಾರೂ ಚಿಂತಿಸುತ್ತಿಲ್ಲ. ಸ್ವೇಚ್ಛಾಚಾರ ಎಲ್ಲೆಡೆ ತಾಂಡವಾಡುತ್ತಿದೆ. ಪ್ರಾಮಾಣಿಕರು ಆರಿಸಿ ಬಂದಾಗ ಮಾತ್ರ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂದು ಅವರು ತಿಳಿಸಿದರು.
ಬಡವರಿಗೆ ಕಣ್ಣೀರು ಬರುತ್ತಿದೆ, ಮಧ್ಯಮ ವರ್ಗದವರ ಪರಿಸ್ಥಿತಿಯೂ ಶೋಚನೀಯವಾಗಿದೆ. ಸ್ವಾತಂತ್ರ್ಯವನ್ನು ಭ್ರಷ್ಟರು, ಶ್ರೀಮಂತರು ದುರುಪಯೋಗ ಪಡಿಸಿಕೊಂಡಿದ್ದಾರೆ. ಲೋಕಸಭೆ, ಶಾಸನ ಸಭೆಗಳು ಭ್ರಷ್ಟರ, ಜಾತಿವಾದಿಗಳ, ಅಪರಾಧಿಗಳ ಕೂಟವಾಗಿದೆ. ಭ್ರಷ್ಟರ ವ್ಯವಸ್ಥೆಯಲ್ಲಿ ಚುನಾವಣೆಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಚುನಾವಣೆಯ ಬಗ್ಗೆ ನಂಬಿಕೆ ಹೋಗುತ್ತಿದೆ ಎಂದು ವಾಟಾಳ್ ಆರೋಪಿಸಿದರು.
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಪ್ರಜಾಪ್ರಭುತ್ವ ಗೌರವಿಸಿ, ಭ್ರಷ್ಟಾಚಾರ ತೊಲಗಿಸಿ, ಪ್ರಾಮಾಣಿಕವಾಗಿ ಚುನಾವಣೆಗಳು ನಡೆಯಬೇಕು ಎಂದು ಆಶಿಸಿದ್ದೇನೆ. ಶಾಸನ ಸಭೆ ಹಾಗೂ ಲೋಕಸಭೆಗೆ ಪ್ರಾಮಾಣಿಕರು ಬರಬೇಕು, ಇದನ್ನು ಪ್ರತಿಪಾದಿಸಲು ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ತರಕಾರಿ ತಳ್ಳುವ ಗಾಡಿ ಮುಂದೆ ಮಹಾತ್ಮ ಗಾಂಧೀಜಿಯವರ ಭಾವಚಿತ್ರವಿಟ್ಟು ಸತ್ಯಾಗ್ರಹ ನಡೆಸುತ್ತಿದ್ದೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಇದನ್ನೂ ಓದಿ: ಬೆಂಗಳೂರಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಹೈಲೈಟ್ಸ್.. ಎಲ್ಲೆಲ್ಲಿ, ಏನೇನಾಯ್ತು ತಿಳಿಯಿರಿ