ಬೆಂಗಳೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಯೋಜನೆಗಳನ್ನು ಘೋಷಿಸಿದಂತೆ ಪುರುಷರಿಗೂ ಉಚಿತ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮೆಜೆಸ್ಟಿಕ್ಗೆ ಆಗಮಿಸಿ ಬಿಎಂಟಿಸಿ ಬಸ್ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಯೋಜನೆಗಳನ್ನು ಪುರುಷರಿಗೂ ವಿಸ್ತರಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್, "ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಪುರುಷರಿಗೂ ನೀಡಬೇಕು. ಇದರಿಂದ ಅವರ ಆದಾಯದ ಮಟ್ಟ ಹೆಚ್ಚಾಗಲಿದೆ. ಮಾನಸಿಕ ಶಕ್ತಿ ತುಂಬುವಂತೆಯೂ ಆಗಲಿದೆ. ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2 ಸಾವಿರ ರೂಪಾಯಿ ಪ್ರತಿ ತಿಂಗಳು ನೀಡಲಾಗುತ್ತಿದೆ. ಅದೇ ರೀತಿ ಮನೆ ಯಜಮಾನನಿಗೂ ನಾರಾಯಣ ಎನ್ನುವ ಹೆಸರಿನ ಅಡಿಯಲ್ಲಿ 2 ಸಾವಿರ ರೂಪಾಯಿ ಜಾರಿ ಮಾಡಬೇಕು" ಎಂದರು.
"ಐತಿಹಾಸಿಕ ದಸರಾ ವೀಕ್ಷಿಸಲು ರಾಜ್ಯದ ಮೂಲೆ ಮೂಲೆಯಿಂದಲೂ ಜನರು ಮೈಸೂರಿಗೆ ಆಗಮಿಸಲಿದ್ದಾರೆ. ಬಸ್ ಪ್ರಯಾಣವಾಗಲಿ, ಗೃಹಲಕ್ಷ್ಮಿಯಾಗಲಿ ಬರೀ ಮಹಿಳೆಯರಿಗೆ ಮಾಡಿದ್ದೀರಿ. ಇದನ್ನು ನಾನು ವಿರೋಧಿಸುವುದಿಲ್ಲ. ಆದರೆ ಪುರುಷರಿಗೂ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು" ಎಂದರು.
ಇದನ್ನೂ ಓದಿ: ಆನೇಕಲ್: ಕಾವೇರಿಗಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಅ.28ಕ್ಕೆ ಪ್ರತಿಭಟನೆ-ವಾಟಾಳ್: ಇತ್ತೀಚಿಗೆ, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 28ರಂದು ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಕಚೇರಿ ಮುಂಭಾಗ ಕನ್ನಡ ಪರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದರು. ತಮಿಳುನಾಡಿನ ಹೊಸೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿದಿದ್ದಕ್ಕೆ, ಗಡಿ ದಾಟಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದ್ದರು.
ಕನ್ನಡ ಪರ ಒಕ್ಕೂಟ ಮತ್ತು ನನ್ನ ಬಗ್ಗೆ ತಮಿಳುನಾಡಿನಲ್ಲಿ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಾವೇರಿ ಪ್ರಾಧಿಕಾರದ ಆದೇಶವನ್ನು ಪಾಲಿಸಿ ರಾಜ್ಯದ ಜನತೆಗೆ ನೀರಿಲ್ಲದಂತೆ ಮಾಡಿದೆ. ಪರಿಸ್ಥಿತಿಯ ಅರಿವಿದ್ದರೂ ತಮಿಳುನಾಡು ಸರ್ಕಾರ ಕೊಡು-ಕೊಳ್ಳುವಿಕೆಯಿಲ್ಲದೇ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದರು.