ಬೆಂಗಳೂರು: ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಮಾಜಿ ಸಚಿವ ಯು. ಟಿ. ಖಾದರ್ ಫರೀದ್ ಅವಿರೋಧವಾಗಿ ಇಂದು ವಿಧಾನಸಭೆಯಲ್ಲಿ ಆಯ್ಕೆಯಾದರು. ಹಂಗಾಮಿ ಸಭಾಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಾಗ ಸಭಾನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯು. ಟಿ. ಖಾದರ್ ಫರೀದ್ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಮುಖ್ಯಮಂತ್ರಿಯವರ ಪ್ರಸ್ತಾವವನ್ನು ಅನುಮೋದಿಸಿದರು.
ಬಳಿಕ ಸಭಾಧ್ಯಕ್ಷರು ಮಾತನಾಡಿ, ಮುಖ್ಯಮಂತ್ರಿ ಸೂಚಿಸಿರುವ ಹಾಗೂ ಉಪಮುಖ್ಯಮಂತ್ರಿ ಅನುಮೋದಿಸಿರುವ ಚುನಾವಣೆ ಪ್ರಸ್ತಾವವನ್ನು ಮತಕ್ಕೆ ಹಾಕುವುದಾಗಿ ಹೇಳಿದರು. ಆಗ ಸದನದಲ್ಲಿ ಧ್ವನಿ ಮತದ ಅಂಗೀಕಾರ ದೊರೆಯಿತು. ಯು. ಟಿ. ಖಾದರ್ ಫರೀದ್ ಅವರು ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಸಭಾಧ್ಯಕ್ಷರು ಘೋಷಿಸಿದರು. ಬಳಿಕ ನೂತನ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸದಸ್ಯರು ಮೇಜು ಕುಟ್ಟಿ ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿದರು.
ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ವಾನುಮತದಿಂದ ಆಯ್ಕೆಯಾದ ಖಾದರ್ ಅವರನ್ನು ಸಂಪ್ರದಾಯದಂತೆ ಸಭಾಧ್ಯಕ್ಷರ ಪೀಠದವರೆಗೂ ಕರೆತಂದರು. ಆಗ ದೇಶಪಾಂಡೆ ಅವರು ನೂತನ ಸ್ಪೀಕರ್ಗೆ ಪೀಠವನ್ನು ಬಿಟ್ಟುಕೊಟ್ಟು ನಿರ್ಗಮಿಸಿದರು.
ಇದನ್ನೂ ಓದಿ: ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ಆಯ್ಕೆ: ಇಂದು ನಾಮಪತ್ರ ಸಲ್ಲಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕ ವಿಧಾನಸಭೆಗೆ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನಿಮ್ಮನ್ನು ಸದನದ ಎಲ್ಲ ಸದಸ್ಯರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದಿಸುವುದಾಗಿ ಹೇಳಿದರು. ನಿಮ್ಮ ತಂದೆ ಯು. ಟಿ. ಫರೀದ್ ಅವರು ಶಾಸಕರಾಗಿದ್ದರು. ನೀವು ಕೂಡ ಉಲ್ಲಾಳ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದು, ಅತ್ಯಂತ ಉತ್ಸಾಹಿ, ಸಕ್ರಿಯ ರಾಜಕಾರಣಿಯಾಗಿದ್ದೀರಿ. ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದೀರಿ. 2012 ರಲ್ಲಿ ಅತಿಹೆಚ್ಚು ಪ್ರಶ್ನೆ ಕೇಳಿ ಸದನವೀರ ಪ್ರಶಸ್ತಿಯನ್ನು ಗಳಿಸಿದ್ದೀರಿ. ಮಾದರಿ ಶಾಸಕರಾಗಿದ್ದೀರಿ. ಕೊಟ್ಟ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದೀರಿ ಎಂದು ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿದರು.
ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ಕೆಲಸ ಮಾಡಬೇಕೆಂದು ಎಲ್ಲರೂ ಬಯಸುತ್ತಾರೆ. ರಾಜ್ಯದ ಜ್ವಲಂತ ಸಮಸ್ಯೆಗಳು ಚರ್ಚೆಯಾಗಬೇಕು. 7 ಕೋಟಿ ಕನ್ನಡಿಗರ ಸಮಸ್ಯೆ ಚರ್ಚೆಯಾಗಬೇಕು. ರಾಜ್ಯದ ಹಿತ, ಅಭಿವೃದ್ಧಿ ನಮಗೆ ಮುಖ್ಯ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ನೂತನ ಸಭಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.
ಸೋಮವಾರ ತಡರಾತ್ರಿ ಕಾಂಗ್ರೆಸ್ ಪಕ್ಷದ ಮುಖಂಡರು ತೀರ್ಮಾನ ಕೈಗೊಂಡು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ, ಹಾಗೂ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಸರ್ವಾನುಮತದಿಂದ ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಅದಾದ ಮರುದಿನವೇ ಯು ಟಿ ಖಾದರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸಾರಥ್ಯದಲ್ಲಿ ಸಭಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿದ್ದು ಮಾತ್ರವಲ್ಲದೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕೂಡ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರಿಂದ, ಬಿಜೆಪಿ ಸಭಾಧ್ಯಕ್ಷ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹಾಗಾಗಿ ಯು ಟಿ ಖಾದರ್ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ನೂತನ ಸ್ಪೀಕರ್ ಯು.ಟಿ.ಖಾದರ್ ಅಭಿನಂದಿಸಿ ಶಾಸಕರಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ