ಬೆಂಗಳೂರು: ಹಸಿರು ಪಟಾಕಿಯನ್ನು ಮಾತ್ರ ಬಳಸಿ ದೀಪಾವಳಿಯನ್ನು ಸರಳ ಸುಂದರವಾಗಿ ಆಚರಿಸುವಂತೆ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ದೀಪಾವಳಿ ಹಬ್ಬದಂದು ಪಟಾಕಿ ಮಾರುವುದು ಮತ್ತು ಸಿಡಿಸುವುದನ್ನು ನಿಷೇಧಿಸುವ ಬಗ್ಗೆ ಸಾರ್ವಜನಿಕರಿಂದ ಹಲವಾರು ಸಲಹೆ ಸೂಚನೆಗಳು ಬಂದಿವೆ. ಕೋವಿಡ್-19 ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಈಗಾಗಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ದೀಪಾವಳಿ ಹಬ್ಬವನ್ನು ಸರಳವಾಗಿ, ಅರ್ಥಗರ್ಭಿತವಾಗಿ, ಭಕ್ತಿಪೂರ್ವಕವಾಗಿ ಆಚರಿಸುವುದು ಸೂಕ್ತವಾಗಿರುತ್ತದೆ. ಈ ಹಿನ್ನೆಲೆ ಹಸಿರು ಪಟಾಕಿಯನ್ನು ಮಾತ್ರ ಬಳಸಿ ದೀಪಾವಳಿಯನ್ನು ಸರಳ ಸುಂದರವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ.
ಪಟಾಕಿ ಸಿಡಿಸದೆ ದೀಪಾವಳಿ ಆಚರಿಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಸಿಎಂ, ಹಬ್ಬಕ್ಕೂ ಮೊದಲೇ ಮುಂಚಿತವಾಗಿ ದೀಪಾವಳಿ ಹಬ್ಬದ ಶುಭಾಶಯ ಎನ್ನುವ ಸಂದೇಶವನ್ನು ಜನತೆಗೆ ನೀಡುತ್ತಾ ಮಾಧ್ಯಮ ಹೇಳಿಕೆ ಮೂಲಕ ಪಟಾಕಿ ಬೇಡ ಎನ್ನುವ ಮನವಿ ಮಾಡಿದ್ದಾರೆ.