ಬೆಂಗಳೂರು: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಲ್ಲಿನ ಕಿಕ್ ಬ್ಯಾಕ್ ಆರೋಪ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡ್ತಿದೆ. ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಮ್ಮ ಸರ್ಕಾರದ ವಿರುದ್ಧವೇ ಸ್ಫೋಟಿಸಿದ ಗೋಲ್ ಮಾಲ್ ಆರೋಪ ಪ್ರತಿಪಕ್ಷಗಳಿಗೂ ಆಹಾರವಾಗಿದೆ. ಅಷ್ಟಕ್ಕೂ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಅದರ ಸುತ್ತ ಸುತ್ತುವರಿದ ಈ ಕಿಕ್ ಬ್ಯಾಕ್ ಆರೋಪ ಏನು ಎಂಬ ವರದಿ ಇಲ್ಲಿದೆ.
ಸಿಎಂ ಹಾಗೂ ಸಿಎಂ ಪುತ್ರ ವಿಜಯೇಂದ್ರನ ವಿರುದ್ಧ ಸಿಡಿದೆದ್ದಿರುವ ಎಂಎಲ್ಸಿ ಹೆಚ್. ವಿಶ್ವನಾಥ್ ತಮ್ಮ ಸರ್ಕಾರದ ಮೇಲೆನೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸಿಎಂ ಪುತ್ರ ವಿಜಯೇಂದ್ರರ ವಿರುದ್ಧವೇ ಹಳ್ಳಿಹಕ್ಕಿ ಕಿಕ್ ಬ್ಯಾಕ್ ನ ನೇರ ಆರೋಪ ಮಾಡಿದ್ದಾರೆ. ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ, ವಿವಾದಕ್ಕೆ ಗ್ರಾಸವಾಗಿದೆ. 20,000 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ಹಳ್ಳಿಹಕ್ಕಿ ಹಗರಣದ ಬಾಣ ಬಿಟ್ಟಿದ್ದಾರೆ. ಈ ಸಂಬಂಧ ಕೆಲ ದಾಖಲೆಗಳನ್ನು ತೋರಿಸಿ, 20,000 ಕೋಟಿ ರೂ. ಮೊತ್ತದ ಈ ಯೋಜನೆ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಸಿಎಂ ಪುತ್ರನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಏನಿದು ಭದ್ರಾ ಮೇಲ್ದಂಡೆ ಯೋಜನೆ?: ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲೂಕಿನ ಲಕ್ಕವಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ನಾಲೆಯ ಮೂಲಕ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗೆ ನೀರು ಉಣಿಸುವುದು ಯೋಜನೆಯ ಉದ್ದೇಶ. ಹನಿ ನೀರಾವರಿ ಮೂಲಕ ನೀರು ಒದಗಿಸುವ ರಾಜ್ಯದ ಬಹುದೊಡ್ಡ ನೀರಾವರಿ ಯೋಜನೆ ಇದಾಗಿದೆ. ಯಾವುದೇ ಅಣೆಕಟ್ಟು ನಿರ್ಮಿಸದೆ ಭಾರೀ ಪ್ರಮಾಣದ ನೀರು ಹಂಚಿಕೆ ಮಾಡಿ ರೂಪಿಸಿದ ಯೋಜನೆ ಇದಾಗಿದೆ.
ಕೇಂದ್ರ ಹೂಡಿಕೆ ಸಮಿತಿಯು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಿ ಅನುಮೋದಿಸಿದೆ. ರಾಷ್ಟ್ರೀಯ ಸ್ಥಾನಮಾನ ಪಡೆದ ರಾಜ್ಯದ ಮೊದಲ ಯೋಜನೆ ಎಂಬ ಹೆಗ್ಗಳಿಕೆಗೆ ಈ ಭದ್ರಾ ಮೇಲ್ದಂಡೆ ಯೋಜನೆ ಪಾತ್ರವಾಗಿದೆ. ಯೋಜನೆಯಿಂದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗೆ ಅನುಕೂಲವಾಗಲಿದೆ. ಯೋಜನೆಗೆ 21,450 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 16,125 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ 2.25 ಲಕ್ಷ ಹೆಕ್ಟೇರ್ ನೀರಾವರಿ ಮಾಡಲು ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರೀಯ ಯೋಜನೆ ಘೋಷಣೆಯಾದ ಹಿನ್ನೆಲೆ 2018-19ನೇ ಸಾಲಿನ ನಂತರದ ವೆಚ್ಚವನ್ನೂ ಕೇಂದ್ರವೇ ನೀಡಲಿದೆ. ಹನಿ ನೀರಾವರಿಯ ಲ್ಯಾಟ್ರಲ್‌ಗಾಗಿ ಆಗುವ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಚಿಕ್ಕಮಗಳೂರು, ಬಯಲುಸೀಮೆಯ ಚಿತ್ರದುರ್ಗ, ತುಮಕೂರು ಜಿಲ್ಲೆಗಳ 357 ಕೆರೆಗಳಿಗೆ ಶೇ.50 ರಷ್ಟು ನೀರು ತುಂಬಿಸುವುದರ ಜತೆಗೆ ಹನಿ ನೀರಾವರಿ ಮೂಲಕ 2.25 ಲಕ್ಷ ಹೆಕ್ಟೇರ್‌ಗೆ ಹನಿ ನೀರಾವರಿ ಸೌಲಭ್ಯ ಸಿಗಲಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಜಲಾಶಯದಿಂದ 17.4 ಟಿಎಂಸಿ, ಭದ್ರಾ ಜಲಾಶಯದಿಂದ 12.5 ಟಿಎಂಸಿ ಒಟ್ಟು 29.9 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.
ಏನಿದು ಕಿಕ್ ಬ್ಯಾಕ್ ಆರೋಪ?: ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಮೊತ್ತ 21,470 ಕೋಟಿಗಳಾಗಿವೆ. ಯೋಜನೆಯ ಕಾಮಗಾರಿ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬುದು ಬಿಜೆಪಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗಂಭೀರ ಆರೋಪ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತರಾತುರಿಯಲ್ಲಿ 20 ಸಾವಿರ ಕೋಟಿ ರೂ. ಹೆಚ್ಚು ಮೊತ್ತದ ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ. ಇದರಲ್ಲಿ ಸಿಎಂ ಕುಟುಂಬದವರು ಶೇ.10 ರಷ್ಟು ಕಮಿಷನ್ ಪಡೆದಿದ್ದಾರೆ ಎಂಬುದು ಹಳ್ಳಿಹಕ್ಕಿ ಆಪಾದನೆ. ಅದರಂತೆ 2,000 ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬುದು ಗಂಭೀರ ಆರೋಪ. ಈ ಯೋಜನೆಗೆ ಹಣವನ್ನೇ ಮೀಸಲಿಟ್ಟಿಲ್ಲ. ಹಾಗಿದ್ದರೂ ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದೆ. ಟೆಂಡರ್ ನಲ್ಲಿ ಭಾಗಿಯಾದ ಗುತ್ತಿಗೆದಾರರಿಂದ ಕಮಿಷನ್ ಪಡೆಯಲಾಗಿದೆ. ಕಾಮಗಾರಿಗೆ ಹಣಕಾಸು ಇಲಾಖೆಯ ಅನುಮತಿ ಪಡೆಯದೇ ಟೆಂಡರ್ ಕರೆಯಲಾಗಿದೆ. ಈ ಸಂಬಂಧ ಮಂಡಳಿ ಸಭೆಯನ್ನೂ ಮಾಡಿಲ್ಲ ಎಂಬುದು ವಿಶ್ವನಾಥ್ ಪ್ರಮುಖ ಆರೋಪ.
ಈ ಸಂಬಂಧ ಆರೋಪ ಸಾಭೀತು ಪಡಿಸುವ ಮಹತ್ವದ ದಾಖಲೆಯನ್ನೇನು ಹೆಚ್.ವಿಶ್ವನಾಥ್ ಬಿಡುಗಡೆ ಮಾಡಿಲ್ಲ. ಆದರೆ ಯೋಜನೆ ಸಂಬಂಧ ಆಡಳಿತಾತ್ಮಕ ಅನುಮೋದನೆ ಪಡೆದ ನಡಾವಳಿ ಪ್ರತಿ, ಟೆಂಡರ್ ಮಾಹಿತಿ ಇರುವ ಕೆಲ ದಾಖಲೆಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ. ಆದರೆ ತರಾತುರಿಯಲ್ಲಿ ಟೆಂಡರ್ ಕರೆದು ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಅವರ ಆರೋಪ, ರಾಜಕೀಯ ವಲಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದೆ. ಇದು ಬಿಜೆಪಿ ಸರ್ಕಾರವನ್ನೂ ತೀವ್ರ ಮುಜುಗರಕ್ಕೀಡು ಮಾಡಿದೆ. ಇತ್ತ ಪ್ರತಿಪಕ್ಷಗಳೂ ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಲು ಪ್ರಾರಂಭಿಸಿವೆ.
ಆರೋಪಕ್ಕೆ ಸರ್ಕಾರ ನೀಡಿದ ಸ್ಪಷ್ಟನೆ ಏನು?: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಅಧಿಕೃತವಾಗಿ ಸ್ಪಷ್ಟನೆಯನ್ನು ನೀಡಿದೆ.
ಯೋಜನೆ ಕಾಮಗಾರಿ ಸಂಬಂಧ ನಿಯಮಾನುಸಾರ 4026.60 ಕೋಟಿ ಮೊತ್ತಕ್ಕೆ 7 ಪ್ಯಾಕೇಜ್‍ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆ ವಿವಿಧ ಹಂತಗಳಲಿವೆ. ಕೋವಿಡ್-19ರ ಹಿನ್ನೆಲೆಯಲ್ಲಿ ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ಮಾಡಲಾಗಿರಲಿಲ್ಲ. ಹೀಗಾಗಿ ಪ್ರಸ್ತುತ ಟೆಂಡರ್ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಈ ಯೋಜನೆಯ ಜಾರಿಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆಯಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಎಲ್ಲಾ ಕಾಮಗಾರಿಗಳನ್ನು 2023-24ನೇ ಸಾಲಿನ ಒಳಗೆ ಪೂರ್ಣಗೊಳಿಸಬೇಕಿರುವುದರಿಂದ ಡ್ರಿಪ್ ಕಾಮಗಾರಿ ಅಂದಾಜು ಪಟ್ಟಿಗಳನ್ನು ಡ್ರಿಪ್ ಸಮಿತಿಯ ಐದು ಸಭೆಗಳಲ್ಲಿ ಚರ್ಚಿಸಿ ಹಾಗೂ ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ಅನುಮತಿ ಪಡೆದು ಕಾಮಗಾರಿ ಟೆಂಡರ್ ಕರೆಯಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆ ಸ್ಪಷ್ಟನೆ ನೀಡಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 21,473.67 ಕೋಟಿ ರೂ. ಮೊತ್ತದ ಸಮಗ್ರ ಪರಿಷ್ಕೃತ ಯೋಜನಾ ವರದಿಯ ಶಿಫಾರಸ್ಸಿನ ಅನ್ವಯ ಸರ್ಕಾರ ಡಿ.16, 2020 ರಂದು ಆರ್ಥಿಕ ಇಲಾಖೆ ಸಹಮತಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಇಲಾಖೆ ತಿಳಿಸಿದೆ.
ಡಿ.24, 2020 ರಂದು ನಡೆದ ಕೇಂದ್ರ ಜಲಶಕ್ತಿ ಮಂತ್ರಾಲಯದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಯೋಜನೆಗೆ 16125.48 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಡಿ.2, 2020 ರಲ್ಲಿ ನಡೆದ ನಿರ್ದೇಶಕ ಮಂಡಳಿಯ 16 ನೇ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿದೆ. ಈ ಯೋಜನೆಯು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಅನುಮೋದಿತವಾಗಿದೆ. ಈ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯಡಿ 16,125.4 ಕೋಟಿ ರೂ. ಗಳನ್ನು ಭರಿಸಲಿದೆ. ಈ ಯೋಜನೆಯನ್ನು 2023-24 ರೊಳಗೆ ಪೂರ್ಣಗೊಳಿಸುವ ಷರತ್ತಿನೊಂದಿಗೆ ಕೇಂದ್ರ ಸರ್ಕಾರ ಅನುದಾನ ಮಂಜೂರು ಮಾಡಿದೆ. ಹೀಗಾಗಿ ಈ ಯೋಜನೆಯ ಜಾರಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಓದಿ: ಸಿಎಂ ಭೇಟಿಯಾದ ಅವಧೂತ: 3ನೇ ಅಲೆ ಬಗ್ಗೆ ಎಚ್ಚರ ಎಂದ ವಿನಯ್ ಗುರೂಜಿ