ಬೆಂಗಳೂರು: ಬಿಜೆಪಿಯವರು ಅನರ್ಹ ಶಾಸಕರ ಕಿವಿಗೆ ಹೂ ಮುಡಿಸಿದ್ದಾರೆ. ಅವರಿಗೆ ಏನೇನೋ ಭರವಸೆ ಕೊಟ್ಟು, ಕೊನೆಗೆ ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ನಂತರ ಅನರ್ಹರಾದ ಶಾಸಕರ ಕಷ್ಟ ಏನು ಅಂತಾ ನನಗೆ ಗೊತ್ತು, ಈ ಹಿಂದೆ ಆ ಕಷ್ಟವನ್ನು ನಾನು ಅನುಭವಿಸಿದ್ದೆ, ಈಗ ನಮ್ಮ ಮಿತ್ರರು ಅನುಭವಿಸುತ್ತಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಅಷ್ಟು ಸುಲಭವಾಗಿ ಕೇಸ್ ಗೆದ್ದು ಬಂದು ಸಚಿವರಾಗೋಕೆ ಸಾಧ್ಯವಿಲ್ಲ. ಬಿಜೆಪಿಯವರು ಮಾತನ್ನು ನಂಬಬೇಡಿ ಎಂದು ನಾನು ಈ ಹಿಂದೆ ಹೇಳಿದ್ದೆ. ಈಗ ದಯಮಾಡಿ ಯಾರು ಬಿಜೆಪಿಯವರ ಆಶ್ವಾಸನೆ ನಂಬಬೇಡಿ. ಯಾಕಂದ್ರೆ ಅವರು ಸಿಎಂ ಸ್ಥಾನ ಬಿಟ್ಟು ಹಣಕಾಸು, ಗೃಹ, ಲೋಕೋಪಯೋಗಿ ಸೇರಿದಂತೆ ಎಲ್ಲವೂ ಕೊಡ್ತೀನಿ ಅಂತಾರೆ. ಆದರೆ ಕೊನೆಗೆ ಅವರ ಆ ಭರವಸೆ ಯಾವುದು ಈಡೇರುವುದಿಲ್ಲ ಎಂದು ಅನರ್ಹ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಯಾರು ತಮಗೆ ಬೆಂಬಲ ನೀಡ್ತಾರೋ ಅವರನ್ನೇ ಅವರು ಮೊದಲು ತುಳಿಯೋದು. ಅನರ್ಹ ಶಾಸಕರು ಅಂದುಕೊಂಡಂತೆ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಿಲ್ಲ. ಬಿಜೆಪಿ ಸರ್ಕಾರದಲ್ಲಿ ಕೆ.ಜಿ. ಬೋಪಯ್ಯನಿಗೆ ಸಚಿವ ಸ್ಥಾನ ತಪ್ಪೋಕೆ ನಮ್ಮ ಕಣ್ಣೀರನೇ ಶಾಪವೇ ಕಾರಣ. ಇಡೀ ದೇಶದಲ್ಲಿ ಪಕ್ಷೇತರರನ್ನು ಅನರ್ಹ ಮಾಡಿದವರು ಅಂದ್ರೆ ಅದು ಕೆ ಜಿ ಬೋಪಯ್ಯ ಮಾತ್ರ ಎಂದು ಮಾಜಿ ಸ್ಪೀಕರ್ ಬೋಪಯ್ಯ ವಿರುದ್ಧವೂ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.