ಬೆಂಗಳೂರು: ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಡಾ. ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ವಿಧಾನಸಭೆ ಕ್ಷೇತ್ರಕ್ಕೆ ಮೇ 19ರಂದು ಉಪಚುನಾವಣೆ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ವೇಳಾಪಟ್ಟಿಯನ್ನ ಪ್ರಕಟಿಸಿದ್ದು, ಏಪ್ರಿಲ್ 22ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ಏ. 22ರಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಏ. 29 ಉಮೇದುವಾರಿಕೆ ಸಲ್ಲಿಸಲು ಕಡೆಯ ದಿನವಾಗಿದೆ. ಏ. 30ರಂದು ನಾಮಪತ್ರ ಪರಿಶೀಲನೆ. ಮೇ 2ಕ್ಕೆ ನಾಮಪ್ರ ಹಿಂದಕ್ಕೆ ಪಡೆಯಲು ಕಡೆಯ ದಿನವಾಗಿರುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯಲ್ಲಿ ತಿಳಿಸಿದೆ. ಇನ್ನು ಮೇ 19 ರಂದು ಉಪಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಅವರು ಮೈತ್ರಿ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಪ್ರತಿಭಟಿಸಿದ್ದರು. ಸಚಿವ ಸ್ಥಾನ ತಪ್ಪಲು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರೇ ಕಾರಣರೆಂದು ಆರೋಪಿಸಿದ್ದ ಡಾ. ಜಾಧವ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದಿದ್ದಾರೆ.
ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಅಗಲಿಕೆಯಿಂದ ತೆರವಾಗಿದ್ದ ಧಾರವಾಡ ಜಿಲ್ಲೆಯ ಕುಂದಗೋಳ ವಿದಾನಸಭೆ ಕ್ಷೇತ್ರದ ಉಪಚುನಾವಣೆಯೂ ಮೇ 19ಕ್ಕೆ ನಿಗದಿಯಾಗಿದೆ. ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದ ಜೊತೆಗೆ ಎರಡು ವಿದಾನಸಭೆ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಸಹ ಹೊರಬೀಳಲಿದೆ.