ಬೆಂಗಳೂರು: ಚಿನ್ನ ಖರೀದಿಸಿ ವಾಪಸ್ ಆಗುತ್ತಿದ್ದವರನ್ನು ಬೆದರಿಸಿ 1 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಕಸಿದು ಪರಾರಿಯಾಗಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ರೈಲ್ವೆ ಪೊಲೀಸ್ ಸಿಬ್ಬಂದಿ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಇಬ್ಬರು ರೈಲ್ವೆ ಪೊಲೀಸ್ ಸಿಬ್ಬಂದಿ ಸಹಿತ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ರೈಲ್ವೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಮೌನೇಶ್, ಸಿದ್ದಪ್ಪ ಹಾಗೂ ರಾಯಚೂರು ಮೂಲದ ಮೌನೇಶ್ ಬಂಧಿತ ಆರೋಪಿಗಳು.
ರಾಯಚೂರಿನ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ, ಅಂಗಡಿ ಮಾಲೀಕರ ಸೂಚನೆಯಂತೆ ಬೆಂಗಳೂರಿಗೆ ಬಂದು ಚಿನ್ನ ಖರೀದಿ ಮಾಡಿದ್ದರು. ಮಾರ್ಚ್ 11ರಂದು ಮೆಜೆಸ್ಟಿಕ್ ಸಮೀಪದ ಆನಂದ ರಾವ್ ಸರ್ಕಲ್ ಬಳಿ ವಾಪಸ್ ರಾಯಚೂರಿಗೆ ತೆರಳಲು ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಬಂದ ಆರೋಪಿಗಳು, ತಾವು ಪೊಲೀಸರೆಂದು ಪರಿಚಯಿಸಿಕೊಂಡಿದ್ದರು. 'ಮೂರು ತಿಂಗಳಿನಿಂದ ನಿಮ್ಮ ಮೇಲೆ ಕಣ್ಣಿಟ್ಟಿದ್ದೇವೆ' ಎಂದು ಬೆದರಿಸಿ, ಚಿನ್ನದ ಗಟ್ಟಿಗಳು, ಅಭರಣದ ಬ್ಯಾಗ್ ಕಸಿದುಕೊಂಡಿದ್ದರು. ಬಳಿಕ ಆಟೋರಿಕ್ಷಾ ಕರೆದು ಇಬ್ಬರನ್ನೂ ಕೂರಿಸಿಕೊಂಡು ರೇಸ್‌ಕೋರ್ಸ್ ರಸ್ತೆಯಲ್ಲಿ ಇಬ್ಬರನ್ನೂ ಇಳಿಸಿ ಡಿಸಿಪಿ ಕಚೇರಿಗೆ ಬರುವಂತೆ ಸೂಚನೆ ನೀಡಿ ಪರಾರಿಯಾಗಿದ್ದರು.
ಘಟನೆಯ ಕುರಿತು ಪ್ರಕರಣದ ದಾಖಲಿಸಿಕೊಂಡ ಉಪ್ಪಾರಪೇಟೆ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಸೂಚನೆಯಂತೆ, ಉಪ್ಪಾರ ಪೇಟೆ ಠಾಣೆಗೆ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ತೆರಳಿ ವಿಚಾರಿಸಿದಾಗ ಆರೋಪಿಗಳು ಉಪ್ಪಾರಪೇಟೆ ಠಾಣೆಯ ಸಿಬ್ಬಂದಿಯಲ್ಲ ಎಂಬುದು ಬಯಲಾಗಿತ್ತು.
ಇದನ್ನೂ ಓದಿ: ಪೊಲೀಸ್ ಸೋಗಿನಲ್ಲಿ ₹1 ಕೋಟಿ ಮೌಲ್ಯದ ಚಿನ್ನದ ಗಟ್ಟಿ ಎಗರಿಸಿದ ಖದೀಮರು- ಸಿಸಿಟಿವಿ ದೃಶ್ಯ
ಬಂಧಿತ ಆರೋಪಿಗಳ ಪೈಕಿ ಮೌನೇಶ್ ಈ ಹಿಂದೆ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡಿ ನಂತರ ಕೆಲಸ ಬಿಟ್ಟಿದ್ದ. ಆತನ ಮಾಹಿತಿಯ ಅನ್ವಯ ದರೋಡೆಯ ಸಂಚು ರೂಪಿಸಿದ್ದ ರೈಲ್ವೆ ಕಾನ್ಸ್ಟೇಬಲ್ಗಳಾದ ಮೌನೇಶ್ ಹಾಗೂ ಸಿದ್ದಪ್ಪ, ಬೆಂಗಳೂರಿಗೆ ಬಂದು ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯನನ್ನು ಬೆದರಿಸಿ ಕೃತ್ಯ ಎಸಗಿದ್ದರು. ಸದ್ಯ ಬಂಧಿತರಿಂದ 1,761 ಗ್ರಾಂ ಚಿನ್ನದ ಗಟ್ಟಿ, 290 ಗ್ರಾಂ ಚಿನ್ನ, 1,180 ಗ್ರಾಂ ಬೆಳ್ಳಿ ಹಾಗೂ 19 ಸಾವಿರ ರೂಪಾಯಿ ನಗದು ಜಪ್ತಿ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಡೆಲಿವರಿ ಬಾಯ್ಸ್ ಪರಾರಿ: ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಐದು ಐಫೋನ್ಗಳು ಹಾಗೂ ಆ್ಯಪಲ್ ವಾಚ್ಗಳನ್ನು ವಿಳಾಸಕ್ಕೆ ತಲುಪಿಸದೆ ಡೆಲಿವರಿ ಬಾಯ್ಗಳಿಬ್ಬರು ಫೋನ್ಗಳ ಸಮೇತ ಪರಾರಿಯಾಗಿರುವ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ವರದಿಯಾಗಿತ್ತು. ಅರುಣ್ ಪಾಟೀಲ್ ಹಾಗೂ ನಯನ್ ಜೆ. ಎಂಬಿಬ್ಬರು ಡೆಲಿವರಿ ಬಾಯ್ಸ್ ಆರು ಐಫೋನ್ ಹಾಗೂ ಆ್ಯಪಲ್ ವಾಚ್ಗಳನ್ನು ನನ್ನ ವಿಳಾಸಕ್ಕೆ ತಲುಪಿಸದೇ ಪರಾರಿಯಾಗಿದ್ದಾರೆ ಎಂದು ತಸ್ಲೀಂ ಆರೀಫ್ ಎಂಬವರು ದೂರು ದಾಖಲಿಸಿದ್ದರು.
ಇದನ್ನೂ ಓದಿ: ಸ್ಕೂಟಿಯಲ್ಲಿ ಇಟ್ಟಿದ್ದ 45 ಸಾವಿರ ನಗದು ಕದ್ದು ಖದೀಮರು ಪರಾರಿ, ಸಿಸಿಟಿವಿಯಲ್ಲಿ ಸೆರೆ