ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಬೀಳಿಸಿ ಬ್ಯಾಗ್ ಕಸಿದು ಬೈಕ್ನಲ್ಲಿ ಪರಾರಿಯಾಗಿದ್ದ ಇಬ್ಬರು ಸುಲಿಗೆಕೋರರನ್ನು ಪುಲಕೇಶಿ ನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.
ಆಸೀಫ್ ಹಾಗೂ ತೌಸಿಫ್ ಬಂಧಿತ ಆರೋಪಿಗಳಾಗಿದ್ದು, ಪುಲಕೇಶಿ ನಗರ ಬಳಿ ಮಧ್ಯಾಹ್ನ 12.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಜೋಷಿನಿ ಎಂಬುವರನ್ನು ಹಿಂಬಾಲಿಸಿ ನಡುರಸ್ತೆಯಲ್ಲೇ ಹೆದರಿಸಿ ಮಹಿಳೆಯ ಬ್ಯಾಗ್ ಕಸಿದುಕೊಂಡಿದ್ದಾರೆ.
ಅಲ್ಲೇ ಕರ್ತವ್ಯದಲ್ಲಿದ್ದ ಟ್ರಾಫಿಕ್ ಕಾನ್ಸ್ಸ್ಟೇಬಲ್ ಹೇಮಂತ್ ಕುಮಾರ್ ಹಾಗೂ ನಾಗೇಂದ್ರ ಎಂಬುವರು ಆರೋಪಿಗಳನ್ನು ಹಿಡಿಯಲು ಮುಂದಾಗುತ್ತಿದ್ದಂತೆ ಮಹಿಳೆಯ ಬ್ಯಾಗ್, ಬೈಕ್ ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದರು.
ಬೈಕ್ ನೋಂದಣಿ ಸಂಖ್ಯೆ ಆಧಾರದ ಮೇಲೆ ಬೈಕ್ ಮಾಲಿಕರನ್ನು ಠಾಣೆಗೆ ಕರೆಯಿಸಿ ವಿಚಾರಣೆಗೊಳಪಡಿಸಿದಾಗ, ಪರಿಚಿತರಿಬ್ಬರು ಬೈಕ್ ಕೇಳಿ ಕೊಂಡೊಯ್ದಿರುವುದಾಗಿ ಮಾಲಿಕ ತಿಳಿಸಿದ್ದಾನೆ.
ಬಳಿಕ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ಧಾರೆ. ಸದ್ಯ ಘಟನೆ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.