ಬೆಂಗಳೂರು : ಜುಲೈ 10 ರಂದು ಜ್ಞಾನಜ್ಯೋತಿ ನಗರದಲ್ಲಿ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಇಂದು ಬೆಳಗ್ಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಜು, ಇಂದಿರಮ್ಮ ಬಂಧಿತ ಆರೋಪಿಗಳಾಗಿದ್ದಾರೆ.
ರಂಜಿತಾ (26) ಕೊಲೆಯಾದ ಮಹಿಳೆ. ಮೃತ ರಂಜಿತಾ ಮತ್ತು ಆಕೆಯ ಪತಿ ಓಂಕಾರ್ ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿಗಳು ವಾಸವಿದ್ದರು. ಮೊಬೈಲ್ ಮತ್ತು ಚಿನ್ನಾಭರಣಕ್ಕಾಗಿ ರಂಜಿತಾಳನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ರಂಜಿತಾಳ ಕತ್ತು ಸೀಳಿ ಕೊಂದು ಚಾಕುವನ್ನು ಆಕೆಯ ಕೈಯಲ್ಲೇ ಇಟ್ಟು ಆರೋಪಿಗಳು ಪರಾರಿಯಾಗಿದ್ದರು. ಘಟನೆ ನಡೆದ ಕೇವಲ 2 ದಿನದಲ್ಲಿ ಹಂತಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬಂಧಿಸಿದ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಮತ್ತು ತಂಡದ ಕಾರ್ಯವನ್ನು ಡಿಸಿಪಿ ಸಂಜೀವ್ ಪಾಟೀಲ್ ಶ್ಲಾಘಿಸಿದ್ದಾರೆ.
ಓದಿ : ಎಂ.ಕೆ. ಹುಬ್ಬಳ್ಳಿಯಲ್ಲಿ ಹಣದ ವಿಚಾರಕ್ಕೆ ಡಾಬಾ ಮಾಲೀಕನ ಕೊಲೆ
ಕಳೆದ ಶುಕ್ರವಾರ ಜ್ಞಾನ ಜ್ಯೋತಿ ನಗರದ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ರಂಜಿತಾ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ವೈಯಕ್ತಿಕ ವಿಚಾರಕ್ಕೆ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಮನೆಯಲ್ಲಿದ್ದ ಯಾವುದೇ ಸಾಮಗ್ರಿಗಳು ಕಾಣೆಯಾಗಿರಲಿಲ್ಲ. ಹಾಗಾಗಿ, ಕುಟುಂಬಸ್ಥರಲ್ಲೇ ಒಬ್ಬರು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.
ಈ ಕುರಿತು ಮೃತಳ ಪತಿ ಜ್ಞಾನಭಾರತಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಮೊದಲು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.