ಬೆಂಗಳೂರು: ಮೂರು ಪಕ್ಷಗಳ ಜಿದ್ದಾಜಿದ್ದಿ ಕಣವಾಗಿರುವ ಶಿರಾ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ವಿಧಾನಪರಿಷತ್ ನ ನಾಲ್ಕು ಕ್ಷೇತ್ರಗಳ ಮತ ಎಣಿಕೆ ಇಂದು ನಡೆಯಲಿದ್ದು, ಅಭ್ಯರ್ಥಿಗಳು ಹಾಗೂ ನಾಯಕರ ಎದೆ ಬಡಿತ ಶುರುವಾಗಿದೆ.
ಅಭ್ಯರ್ಥಿಗಳಿಗೆ ಮಾತ್ರವಲ್ಲದೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಉಪಚುನಾವಣೆ ಪ್ರತಿಷ್ಠೆಯಾಗಿದೆ.
ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಅಭ್ಯರ್ಥಿಗಳು ಸೇರಿದಂತೆ ಒಟ್ಟು 31 ಅಭ್ಯರ್ಥಿಗಳ ಭವಿಷ್ಯ ಇಂದು ಬಹಿರಂಗವಾಗಲಿದೆ. ಶಿರಾ ಕ್ಷೇತ್ರದ ಮತ ಎಣಿಕೆ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್, ಆರ್.ಆರ್.ನಗರ ಕ್ಷೇತ್ರದ ಮತ ಎಣಿಕೆಯು ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ನಡೆಯಲಿದೆ. ಬೆಳಗ್ಗೆ 7.30 ರ ಸುಮಾರಿಗೆ ಸ್ಟ್ರಾಂಗ್ ರೂಂ ತೆಗೆಯಲಾಗುತ್ತದೆ. ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಥರ್ಮಲ್ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಲಾಗುತ್ತದೆ.
ಮತ ಎಣಿಕೆಯನ್ನು ಅಂಚೆ ಮತಗಳ ಎಣಿಕೆಯ ಮೂಲಕ ಪ್ರಾರಂಭಿಸಲಾಗುತ್ತದೆ. ನಂತರ ಇವಿಎಂ ಮತಗಳ ಎಣಿಕೆಯನ್ನು ಆರಂಭಿಸಲಾಗುತ್ತದೆ. ಶಿರಾ ಕ್ಷೇತ್ರದ ಮತ ಎಣಿಕೆಯು 24 ಸುತ್ತಿನಲ್ಲಿ ಅಂತಿಮಗೊಂಡರೆ, ಆರ್.ಆರ್.ನಗರ ಕ್ಷೇತ್ರದ ಮತ ಎಣಿಕೆಯು 25 ಸುತ್ತಿನಲ್ಲಿ ಮುಗಿಯಲಿದೆ. ಪ್ರತಿ ಟೇಬಲ್ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್‌ನಂತೆ ಹಾಜರಿರಲು ಅವಕಾಶ ನೀಡಲಾಗಿದೆ. ಮತ ಎಣಿಕೆ ಏಜೆಂಟ್‌ಗೆ ಈಗಾಗಲೇ ಪಾಸ್ ವಿತರಣೆ ಮಾಡಲಾಗಿದ್ದು, ಪಾಸ್ ಇರುವವರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನಚ್ಚರಿಕೆ ಕ್ರಮ ವಹಿಸಿ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ಶಿರಾ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಅವರು ಪ್ರಮುಖವಾಗಿ ಅಖಾಡದಲ್ಲಿದ್ದಾರೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಕಣದಲ್ಲಿದ್ದಾರೆ.
ವಿಧಾನಪರಿಷತ್ ಚುನಾವಣೆ ಫಲಿತಾಂಶವೂ ಇಂದು : ವಿಧಾನ ಪರಿಷತ್ನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳಿಗೆ ಇಂದು ಮತ ಎಣಿಕೆ ನಡೆಯುತ್ತಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಮತ ಎಣಿಕೆಗೆ 4 ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ಮತ ಎಣಿಕೆ ಎಲ್ಲೆಲ್ಲಿ : ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಮತ ಕ್ಷೇತ್ರದ ಮತ ಎಣಿಕೆಯು ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದ್ದು, ಪ್ರತ್ಯೇಕವಾಗಿ ಎರಡು ಹಾಲ್‌ನಲ್ಲಿ ತಲಾ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.
ಪದವೀಧರ ಕ್ಷೇತ್ರದ ಮತ ಎಣಿಕೆಯು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಒಂದು ಹಾಲ್‌ನಲ್ಲಿ 7 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯು ಕಲಬುರ್ಗಿ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ನಡೆಯುತ್ತಿದ್ದು, ಒಂದು ಹಾಲ್‌ನಲ್ಲಿ 7 ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಕಣದಲ್ಲಿ 40 ಅಭ್ಯರ್ಥಿಗಳು : ವಿಧಾನಪರಿಷತ್‌ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳ ಚುನಾವಣಾ ಕಣದಲ್ಲಿ ಅಂತಿಮವಾಗಿ 40 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳು, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಮತ್ತು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ನಾಲ್ಕು ಕ್ಷೇತ್ರದಲ್ಲಿ ಆಡಳಿತರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್‌ನ ತಲಾ 4 ಅಭ್ಯರ್ಥಿಗಳು, ನೋಂದಾಯಿತ ಪಕ್ಷದಿಂದ 6 ಅಭ್ಯರ್ಥಿಗಳು ಮತ್ತು 22 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಣದಲ್ಲಿರುವವರು ಎಷ್ಟು ? : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಕಣದಲ್ಲಿ 15 ಮಂದಿ ಇದ್ದಾರೆ. ಪ್ರಮುಖವಾಗಿ ಬಿಜೆಪಿಯಿಂದ ಚಿದಾನಂದ ಎಂ.ಗೌಡ, ಕಾಂಗ್ರೆಸ್ ನಿಂದ ರಮೇಶ್‌ಬಾಬು ಹಾಗೂ ಜೆಡಿಎಸ್ ಆರ್.ಚೌಡರೆಡ್ಡಿ ತೂಪಲ್ಲಿ ಅಖಾಡದಲ್ಲಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶರಣಪ್ಪ ಮಟ್ಟೂರ (ಕಾಂಗ್ರೆಸ್), ಶಶಿಲ್ ನಮೋಶಿ (ಬಿಜೆಪಿ), ತಿಮ್ಮಯ್ಯ ಪುರ್ಲೆ (ಜೆಡಿಎಸ್) ಕಣದಲ್ಲಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಪುಟ್ಟಣ್ಣ, ಜೆಡಿಎಸ್‍ನಿಂದ ಎ.ಪಿ.ರಂಗನಾಥ್, ಕಾಂಗ್ರೆಸ್‍ನಿಂದ ಪ್ರವೀಣ್ ಪೀಟರ್ ಅಖಾಡದಲ್ಲಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ. ಸುಂಕನೂರ (ಬಿಜೆಪಿ), ಆರ್.ಎಂ. ಕುಬೇರಪ್ಪ ( ಕಾಂಗ್ರೆಸ್), ಶಿವಶಂಕರ ಕಲ್ಲೂರ (ಜೆಡಿಎಸ್), ಬಸವರಾಜ ಗುರಿಕಾರ ( ಪಕ್ಷೇತರ) ಅಖಾಡದಲ್ಲಿದ್ದಾರೆ. ಒಟ್ಟಾರೆ, ಮತ ಎಣಿಕೆ ಬಳಿಕ ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆಯೋ ಎಂಬುದು ಇಂದು ಸಂಜೆ ಫಲಿತಾಂಶದವರೆಗೆ ಕಾಯಲೇಬೇಕಾಗಿದೆ.