ಬೆಂಗಳೂರು: ಕನ್ನಡ ಭಾಷೆಗೆ ಅವಮಾನ ಮಾಡಿದ್ದಕ್ಕೆ ವ್ಯಕ್ತಿಗೆ ಹಲ್ಲೆ ನಡೆಸಲಾಗಿದೆ ಎನ್ನಲಾದ ವಿಡಿಯೋ ವೈರಲ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತ ಥಳಿತಕ್ಕೊಳಗಾಗಿರುವುದೇ ಬೇರೆ ಕಾರಣಕ್ಕೆ ಎಂಬ ವಿಚಾರ ಹೊರಬಿದ್ದಿದೆ.
ನವೆಂಬರ್ 16ರಂದು ಕನ್ನಡ ಭಾಷೆ ಅವಮಾನ ಮಾಡಿದ ವಿಚಾರವಾಗಿ ಒಬ್ಬ ವ್ಯಕ್ತಿಯನ್ನು ಗಾಂಧಿನಗರದಲ್ಲಿ ಥಳಿಸಲಾಗಿದೆ ಎಂಬ ಸುದ್ದಿ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಗರದ ಉಪ್ಪರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಸ್ಪಷ್ಟನೆ ನೀಡಿದ್ದು, ಆ ದಿನ 4 ಗಂಟೆಗೆ ಜಗಳ ಶುರುವಾಗಿದ್ದು ಕನ್ನಡ ಭಾಷೆಗೆ ಅವಮಾನ ಮಾಡಿದ್ದಕ್ಕಲ್ಲ. ಬಾರ್ನಲ್ಲಿ ಬಿಯರ್ ತಡವಾಗಿ ಕೊಟ್ಟಿದ್ದಕ್ಕೆ ಎಂದು ತಿಳಿಸಿದ್ದಾರೆ.
ಆಂಧ್ರ ಮೂಲದ ವ್ಯಕ್ತಿ ಹಾಗೂ ಬಾರ್ ಕ್ಯಾಶಿಯರ್ ಮತ್ತು ಸಿಬ್ಬಂದಿ ನಡುವೆ ನಡೆದ ಗಲಾಟೆ ಇದಾಗಿದೆ. ಅರ್ಧ ಗಂಟೆ ತಡವಾಗಿ ಬಿಯರ್ ನೀಡಿದ್ದಕ್ಕೆ ಗ್ರಾಹಕ ಪ್ರಶ್ನಿಸಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಬಾರ್ನಲ್ಲಿ ಗಲಾಟೆ ನಡೆದಿತ್ತು.
ಬಾರ್ ಕ್ಯಾಶಿಯರ್, ಸಿಬ್ಬಂದಿ ಸೇರಿ ಗ್ರಾಹಕನಿಗೆ ಮನಬಂದಂತೆ ಥಳಿಸಿದ್ದರು. ಬಳಿಕ ಪ್ರಕರಣದಿಂದ ಬಚಾವಾಗಲು ಭಾಷೆಯ ಬಣ್ಣ ಕಟ್ಟಿದ್ದರು. ಈಗಾಗಲೇ ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಯಾವುದೇ ಸಾರ್ವಜನಿಕರು ಭಾಗಿಯಾಗಿಲ್ಲ ಎಂದು ಸಂಜೀವ್ ಪಾಟೀಲ್ ತಿಳಿಸಿದ್ದಾರೆ.