ಬೆಂಗಳೂರು: ಸಚಿವ ಮುನಿರತ್ನ ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿನ 9,564 ಮತದಾರರ ಮೂಲ ಗುರುತಿನ ಚೀಟಿಗಳನ್ನು ವಶದಲ್ಲಿ ಇಟ್ಟುಕೊಂಡಿದ್ದು, ಹಿಂದಿರುಗಿಸುವ ಸಂದರ್ಭದಲ್ಲಿ ಮತದಾರರಿಗೆ ನನ್ನ ಪರ ಮತ ಹಾಕದಂತೆ ಬೆದರಿಕೆ ಹಾಕಿದ್ದ ಪರಿಣಾಮ ಚುನಾವಣೆಯಲ್ಲಿ ನಾನು ಸೋತೆ ಎಂದು ತುಳಸಿ ಮುನಿರಾಜಯ ಗೌಡ ಹೈಕೋರ್ಟ್ನಲ್ಲಿ ವಿವರಿಸಿದರು.
ಸಚಿವ ಮುನಿರತ್ನ ವಿರುದ್ಧ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ಅಕ್ರಮ ಆರೋಪದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಪಾಟಿ ಸವಾಲಿನಲ್ಲಿ ವಿವರಣೆ ನೀಡಿದ್ದಾರೆ. ಪ್ರಕರಣ ಸಂಬಂಧ ಕೇಳಿದ ಪ್ರಶ್ನೆಗಳಿಗೆ ಮುನಿರಾಜುಗೌಡ ವಿವರವಾಗಿ ಉತ್ತರಿಸಿದ್ದಕ್ಕೆ ವಿರೋಧ ವ್ಯಕ್ತ ಪಡಿಸಿದರು. ಅಲ್ಲದೆ, ಈ ವೇಳೆ ನ್ಯಾಯಮೂರ್ತಿಗಳು, ಪಾಟಿ ಸವಾಲಿನ ವೇಳೆ ಅರ್ಜಿದಾರರು ಕಟಕಟೆಯಲ್ಲಿ ನಿಂತು ಹೇಳುವ ಪ್ರತಿಯೊಂದು ವಿವರವನ್ನೂ ಕೋರ್ಟ್ ದಾಖಲು ಮಾಡಿಕೊಳ್ಳಬೇಕಾಗುತ್ತದೆ.
ಇದು ಭಾರತೀಯ ಸಾಕ್ಷ್ಯ ಅಧಿನಿಯಮಗಳ ಪಾಲನೆಯ ಮೂಲ ಗುಣ. ಅರ್ಜಿದಾರರು ಯಾವೆಲ್ಲಾ ವಿಷಯಗಳನ್ನು ಹೇಳಲು ಬಯಸುತ್ತಾರೋ ಹೇಳಲು ಬಿಡಿ. ಅದಕ್ಕೆ ತಡೆ ಒಡ್ಡಬೇಡಿ. ನಾನು ಎಲ್ಲವನ್ನೂ ಯಥಾವತ್ ದಾಖಲಿಸಿಕೊಳ್ಳುತ್ತೇನೆ. ವಾದ ಮಾಡುವಾಗ ಬೇಕಿದ್ದರೆ ಅದನ್ನು ಪರಿಶೀಲಿಸೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿದರು.
ಪ್ರಕರಣದ ಹಿನ್ನೆಲೆ ಏನು?: 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಅಕ್ರಮ ಆರೋಪದಡಿ ಮುನಿರತ್ನ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆ, ನಂದಿನಿ ಲೇಔಟ್ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಮತ್ತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಪ್ರಸ್ತುತ ಸಚಿವರಾಗಿರುವ ಮುನಿರತ್ನ ಅವರು 2018ರ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅಂದು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಪಿ.ಎಂ.ಮುನಿರಾಜು ಗೌಡ ಈ ಅರ್ಜಿ ಸಲ್ಲಿಸಿದ್ದಾರೆ. ಮುನಿರತ್ನ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅನೂರ್ಜಿತ ಎಂದು ಸಾರಬೇಕು ಎಂದು ಅರ್ಜಿದಾರರ ಮನವಿ ಮಾಡಿದ್ದರು.
ಈಗ ಒಂದೇ ಪಕ್ಷದಲ್ಲಿರುವ ಮುನಿರಾಜು- ಮುನಿರತ್ನ: 2018ರ ವಿಧಾನಸಭೆ ಚುನನಾವಣೆ ವೇಳೆ ಇಬ್ಬರು ರಾಜಕೀಯವಾಗಿ ಬದ್ಧ ವೈರಿಗಳು. ತುಳಸಿ ಮುನಿರಾಜುಗೌಡ ಮೂಲತಃ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ರಾಜರಾಜೇಶ್ವರಿನಗರ ಕ್ಷೇತ್ರದಿಂದ 2018 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಆಗ ಕಾಂಗ್ರೆಸ್ನಲ್ಲಿದ್ದ ಮುನಿರತ್ನ ತುಳಿಸಿಯ ಎದುರಾಳಿ ಆಗಿದ್ದರು.
ಇಬ್ಬರು ತುರುಸಿನ ಚುನಾವಣಾ ಪ್ರಚಾರ ನಡೆಸಿದ್ದರು. ಈ ವೇಳೆ, ತುಳಸಿ ಮುನಿರಾಜುಗೌಡ, ನಕಲಿ ವೋಟರ್ ಐಡಿಗಳು ಹಾಗೂ ನಾನಾ ಅಕ್ರಮಗಳ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ, ಮುನಿರತ್ನ ವಿರುದ್ಧ ಚುನಾವಣಾ ಅಯೋಗಕ್ಕೆ ಮುನಿರತ್ನ ವಿರುದ್ಧ ದೂರು ನೀಡಿದ್ರು.
ತುಳಸಿ ಮುನಿರಾಜುಗೌಡರ ದೂರು ಆಧರಿಸಿ, ಆಯೋಗವು ಮುನಿರತ್ನ ಅವರ ಬೆಂಬಲಿಗರ ಮೇಲೆ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗ, ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯನ್ನು ಕೆಲ ಸಮಯ ಮುಂದೂಡಿತ್ತು. ಆದರೆ ನಂತರ ನಡೆದ ಚುನಾವಣೆಯಲ್ಲಿ ಮುನಿರತ್ನ ಅವರು 25 ಸಾವಿರ ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಇದನ್ನು ಪ್ರಶ್ನಿಸಿದ್ದ ತುಳಸಿ ಮುನಿರಾಜುಗೌಡ, ಹೈಕೋರ್ಟ್ ಮೊರೆ ಹೋಗಿ ಮುನಿರತ್ನರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದಾವೆ ಹೂಡಿದ್ದರು.
ಇದನ್ನೂ ಓದಿ: ನರ್ಸಿಂಗ್ ಕಾಲೇಜು ಪರಿಶೀಲನೆಗೆ ವಿಧಾನಪರಿಷತ್ ಉಪ ಸಮಿತಿ ರಚಿಸಿರುವುದರಲ್ಲಿ ತಪ್ಪಿಲ್ಲ ಎಂದ ಹೈಕೋರ್ಟ್